ಮಹಿಷಾಸುರಮರ್ಧಿನಿ ಮಂಟಪ
ಮಹಿಷಾಸುರಮರ್ದಿನಿ ಮಂಟಪ ಮಹಿಷಾಸುರಮರ್ದಿನಿ ಗುಹಾ ದೇವಾಲಯ | |
---|---|
ಭೂಗೋಳ | |
ಕಕ್ಷೆಗಳು | 12°37′00″N 80°11′30″E / 12.6167°N 80.1917°E |
ದೇಶ | ಭಾರತ |
ರಾಜ್ಯ | ತಮಿಳುನಾಡು |
ಜಿಲ್ಲೆ | ಕಾಂಚೀಪುರಂ ಜಿಲ್ಲೆ |
ವಾಸ್ತುಶಿಲ್ಪ | |
ಶಾಸನಗಳು | UNESCO ದ ಏಷ್ಯಾ-ಪೆಸಿಫಿಕ್ ಅಡಿಯಲ್ಲಿ ೧೯೮೪ ರಲ್ಲಿ ಕೆತ್ತಲಾಗಿದೆ |
ಇತಿಹಾಸ ಮತ್ತು ಆಡಳಿತ | |
ಸೃಷ್ಟಿಕರ್ತ | ಪಲ್ಲವ ವಂಶ |
ಮಹಿಷಾಸುರಮರ್ಧಿನಿ ಮಂಟಪ (ಗುಹೆ ದೇವಾಲಯ; ಯಂಪೂರಿ ಎಂದೂ ಕರೆಯುತ್ತಾರೆ) [೧] ಪಲ್ಲವ ರಾಜವಂಶದ ೭ ನೇ ಶತಮಾನದ ಉತ್ತರಾರ್ಧದ ಭಾರತೀಯ ರಾಕ್-ಕಟ್ ವಾಸ್ತುಶಿಲ್ಪದ ( ರಾಕ್-ಕಟ್ ವಾಸ್ತುಶಿಲ್ಪವೆಂದರೆ ನೈಸರ್ಗಿಕವಾಗಿ ಹುಟ್ಟಿದ ಘನ ಬಂಡೆಯನ್ನು ಉತ್ಖನನ ಮಾಡುವ ಮೂಲಕ ಕಟ್ಟಡಗಳು ಮತ್ತು ಶಿಲ್ಪಗಳನ್ನು ರಚಿಸುವುದು ) ಒಂದು ಉದಾಹರಣೆಯಾಗಿದೆ. ಇದು ಮಾಮಲ್ಲಪುರಂನಲ್ಲಿರುವ ಇತರ ಗುಹೆಗಳೊಂದಿಗೆ ಬೆಟ್ಟದ ಮೇಲೆ, ದೀಪಸ್ತಂಭದ ಬಳಿ ಇರುವ ಬಂಡೆಯಿಂದ ಕತ್ತರಿಸಿದ ಗುಹೆ ದೇವಾಲಯವಾಗಿದೆ. ಮಹಾಬಲಿಪುರಂ ಎಂದೂ ಕರೆಯಲ್ಪಡುವ ಮಾಮಲ್ಲಪುರಂ ಭಾರತದ ತಮಿಳುನಾಡು ರಾಜ್ಯದ ಚೆನ್ನೈನ ದಕ್ಷಿಣಕ್ಕಿರುವ ಒಂದು ಸಣ್ಣ ಹಳ್ಳಿಯಾಗಿದೆ. [೨] ಈ ದೇವಾಲಯವು ೧೯೮೪ ರಲ್ಲಿ ಕೆತ್ತಲಾದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಮಹಾಬಲಿಪುರಂನಲ್ಲಿರುವ ಸ್ಮಾರಕಗಳ ಗುಂಪಿನ ಭಾಗವಾಗಿದೆ. ಈ ಗುಹೆ ದೇವಾಲಯವು ಅನೇಕ ಆಸಕ್ತಿದಾಯಕ ವಾಸ್ತುಶಿಲ್ಪದ ಲಕ್ಷಣಗಳನ್ನು ಹೊಂದಿದೆ. ಅದರಲ್ಲಿ ಮೂರು ಗರ್ಭಗುಡಿಗಳ ಗುಹೆಯ ಗೋಡೆಗಳ ಮೇಲಿರುವ ಮೂರು ಉಬ್ಬುಶಿಲ್ಪಗಳು ಪ್ರಮುಖವಾಗಿವೆ. ಒಂದನೆಯದು, ವಿಷ್ಣುವು ಏಳು ಹೆಡೆಯ ಸರ್ಪವಾದ ಆದಿಶೇಷನ ಮೇಲೆ ಮಲಗಿರುವುದು, ಎರಡನೆಯದು, ಗುಹೆ ದೇವಾಲಯದ ಮುಖ್ಯ ದೇವತೆಯಾದ ದುರ್ಗೆ ಎಮ್ಮೆ ರೂಪದ ರಾಕ್ಷಸನಾದ ಮಹಿಷಾಸುರನನ್ನು ವಧಿಸುವುದು ಮತ್ತು ಮೂರನೇಯದು, ಗರ್ಭಗುಡಿಯಲ್ಲಿರುವ ಶಿವನ ಶಿಲ್ಪ.[೩] [೪]
ದಂತಕಥೆ
[ಬದಲಾಯಿಸಿ]ದಂತಕಥೆಯ ಪ್ರಕಾರ ದುರ್ಗಾ ರಾಕ್ಷಸನಾದ ಮಹಿಷಾಸುರನನ್ನು ಕೊಂದಳು. ಆದ್ದರಿಂದ ಅವನ ವಧೆಯ ನಂತರ ಆಕೆಗೆ ಮಹಿಷಾಸುರಮರ್ದಿನಿ ಎಂಬ ಬಿರುದನ್ನು ನೀಡಲಾಯಿತು. ಗ್ರಾನೈಟ್‍ನಿಂದ ಕೆತ್ತಿದ ಗುಹೆ ದೇವಾಲಯವು ಮಹಿಷಾಸುರಮರ್ಧಿನಿ ದೇವಿಯನ್ನು ಚಿತ್ರಿಸುತ್ತದೆ. ಇದನ್ನು ದುರ್ಗಾ ದೇವಿಯ ಅವತಾರವೆಂದು ಪರಿಗಣಿಸಲಾಗಿದೆ ಹಾಗೂ ಅವಳ ಹೆಸರನ್ನು "ಮಹಿಷಾಸುರಮರ್ಧಿನಿ ಗುಹೆ ದೇವಾಲಯ" ಎಂದು ಹೆಸರಿಸಲಾಗಿದೆ. ಗುಹೆಯ ಆಂತರಿಕ ಉಬ್ಬು ಈ ಯುದ್ಧವನ್ನು ಚಿತ್ರಿಸುತ್ತದೆ. ದೇವಿಯು ಸಿಂಹದ ಮೇಲೆ ಸವಾರಿ ಮಾಡುತ್ತಿರುವಂತೆ ತೋರಿಸಲಾಗಿದೆ. ಅವಳ ಹಲವಾರು ತೋಳುಗಳು ಬಿಲ್ಲು ಮತ್ತು ಬಾಣವನ್ನು ಹಿಡಿದಿಟ್ಟುಕೊಂಡು ಓಡುತ್ತಿರುವ ಮಹಿಷನನ್ನು ಹಿಂಬಾಲಿಸುತ್ತಿವೆ. [೫]
ಇತಿಹಾಸ
[ಬದಲಾಯಿಸಿ]ಈ ಗುಹೆಯು ಪಲ್ಲವ ರಾಜವಂಶದ ರಾಜ ನರಸಿಂಹವರ್ಮನ್ ಮಹಾಮಲ್ಲನ (ಕ್ರಿ.ಶ. ೬೩೦ - ೬೬೮) ಅವಧಿಗೆ ಸಂಬಂಧಿಸಿದೆ ಹಾಗೂ ಅವರ ಹೆಸರನ್ನೇ ಈ ಪಟ್ಟಣಕ್ಕೆ ಇಡಲಾಗಿದೆ. [೬] ಗುಹೆ ವಾಸ್ತುಶಿಲ್ಪವು ಪಶ್ಚಿಮ ಭಾರತದಲ್ಲಿ ಕೆತ್ತಿದ ಮಹಾನ್ ಧಾರ್ಮಿಕ ವಿಷಯಗಳ ಮುಂದುವರಿಕೆಯಾಗಿದೆ ಎಂದು ಹೇಳಲಾಗುತ್ತದೆ. ಪಲ್ಲವ ರಾಜರಾದ ಒಂದನೇ ಮಹೇಂದ್ರ ವರ್ಮನ್ ಮತ್ತು ರಾಜಸಿಂಹ ಅಥವಾ ಒಂದನೇ ನರಸಿಂಹವರ್ಮನ್‍ರ ಆಳ್ವಿಕೆಯಲ್ಲಿ ವಿಕಸನಗೊಂಡ ಗುಹೆಯ ಒಳಗಿನ ಗೋಡೆಗಳ ಮೇಲೆ ಕೆತ್ತಿದ ಕುಳಿತಿರುವ ಸಿಂಹಗಳು, ಗುಹೆಯು ಪರಿವರ್ತನೆಯ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ಶೈಲಿಯನ್ನು ಮಾಮಲ್ಲನ ಮಗನಾದ ಒಂದನೇ ಪರಮೇಶ್ವರವರ್ಮನ್ ಮುಂದುವರಿಸಿದನು. [೭] ಮಹಾಬಲಿಪುರಂ ಪಟ್ಟಣವು ಮಾಮಲ್ಲನ ಹೆಸರನ್ನು ಪಡೆದ ನಂತರವೇ ಸ್ಥಾಪನೆಯಾಯಿತು ಎಂದು ಐತಿಹಾಸಿಕ ಸಂಶೋಧನೆಯು ದೃಢಪಡಿಸಿದೆ ಹಾಗೂ ಅಲ್ಲಿರುವ ಗುಹೆಗಳು ಮತ್ತು ರಥಗಳು ಕ್ರಿ.ಶ. ೬೫೦ ರಲ್ಲಿ ಅವನ ಆಳ್ವಿಕೆಗೆ ಕಾರಣವಾಗಿವೆ. [೮]
ಭೂಗೋಳಶಾಸ್ತ್ರ
[ಬದಲಾಯಿಸಿ]ಮಹಿಷಾಸುರ ಮರ್ಧಿನಿ ಗುಹೆ ಅಥವಾ ಮಂಟಪವು ಹಿಂದೂ ಮಹಾಸಾಗರದ ಬಂಗಾಳ ಕೊಲ್ಲಿಯ ಕೋರಮಂಡಲ್ ಕರಾವಳಿಯಲ್ಲಿರುವ ಮಹಾಬಲಿಪುರಂ ಪಟ್ಟಣದ ಇತರ ಗುಹೆಗಳೊಂದಿಗೆ ಬೆಟ್ಟದ ಶ್ರೇಣಿಯ ತುದಿಯಲ್ಲಿದೆ. ಈಗ ಕಾಂಚೀಪುರಂ ಜಿಲ್ಲೆಯಲ್ಲಿ ಇದು ಚೆನ್ನೈ ನಗರದಿಂದ (ಹಿಂದೆ ಮದ್ರಾಸ್) ಸರಿಸುಮಾರು ೫೮ ಕಿಲೋಮೀಟರ್ (೩೬ಮೈಲಿಗಳು) ಮತ್ತು ಚಿಂಗಲ್‌ಪೇಟ್‌ನಿಂದ ಸುಮಾರು ೨೦ ಮೈಲಿಗಳು (೩೨ ಕಿ.ಮೀ.) ದೂರದಲ್ಲಿದೆ. [೯] ಅದರ ಪಕ್ಕದಲ್ಲಿ ಒಂದು ಲೈಟ್ ಹೌಸ್ ಇದೆ. ೮ ನೇ ಶತಮಾನದ ಓಲಕ್ಕನ್ನೇಶ್ವರ ದೇವಾಲಯ ಎಂದು ಕರೆಯಲ್ಪಡುವ ಒಂದು ರಚನಾತ್ಮಕ ದೇವಾಲಯವು (ತಪ್ಪಾಗಿ ಮಹಿಷಾಸುರ ದೇವಾಲಯ ಎಂದು ಕರೆಯಲ್ಪಡುತ್ತದೆ) ಈ ಗುಹೆಯ ಸಮೀಪದಲ್ಲಿ ಮಾಮಲ್ಲಪುರಂನ ರಮಣೀಯ ದೃಶ್ಯಗಳನ್ನು ಒದಗಿಸುವ ಅನುಕೂಲಕರ ಸ್ಥಳದಲ್ಲಿದೆ. ದಕ್ಷಿಣಕ್ಕೆ ಕೆಲವು ಕಿಲೋಮೀಟರ್ ದೂರದಲ್ಲಿ ಅಣುಶಕ್ತಿ ಕೇಂದ್ರವಿರುವುದರಿಂದ ಈ ಪ್ರದೇಶವು ಹೆಚ್ಚಿನ ಭದ್ರತಾ ವಲಯವಾಗಿದೆ. ಆದ್ದರಿಂದ ಇಲ್ಲಿ ಛಾಯಾಗ್ರಹಣವನ್ನು ನಿಷೇಧಿಸಲಾಗಿದೆ. [೧೦]
ವಿನ್ಯಾಸ
[ಬದಲಾಯಿಸಿ]ಗುಹಾ ದೇಗುಲವು ಪೂರ್ವಕ್ಕೆ ಮುಖಮಾಡಿದೆ ಹಾಗೂ ದೇವಾಲಯವು ಮೂರು ಕೋಣೆಗಳನ್ನು ಹೊಂದಿದೆ. ಇದರ ಆಂತರಿಕ ಆಯಾಮಗಳು ೩೨ ಅಡಿ (೯.೮ ಮೀ.) ಉದ್ದ, ೧೫ ಅಡಿ (೪.೬ ಮೀ.) ಅಗಲ ಮತ್ತು ೧೨.೫ ಅಡಿ (೩.೮ ಮೀ.) ಎತ್ತರವಿದೆ. ಅದರ ಪಾರ್ಶ್ವದಲ್ಲಿರುವ ಎರಡು ಕೋಣೆಗಳಿಗೆ ಹೋಲಿಸಿದರೆ ಮುಖ್ಯ ಕೇಂದ್ರ ಕೊಠಡಿಯ ಮುಂಭಾಗದ ಪ್ರಕ್ಷೇಪಣವಿದೆ. ಗುಹೆಯ ಮುಂಭಾಗದಲ್ಲಿ ೧೦ ಕುದುರೆ-ಆಕಾರದ ಕಿಟಕಿಗಳಿವೆ. ಇದನ್ನು ತಮಿಳು ಭಾಷೆಯಲ್ಲಿ ಕೂಡು ಎಂದು ಕರೆಯುತ್ತಾರೆ. ಇವು ಅಪೂರ್ಣ ಕೆತ್ತನೆಗಳಾಗಿವೆ. ಮುಂಭಾಗವು ನಾಲ್ಕು ಕೆತ್ತಿದ ಕಂಬಗಳು ಮತ್ತು ತುದಿಗಳಲ್ಲಿ ಎರಡು ಪೈಲಸ್ಟರ್ಗಳನ್ನು (ಗೋಡೆಯೊಂದಿಗೆ ಕೂಡಿಸಿರುವ ಚೌಕಸ್ಥಂಭ ) ಹೊಂದಿದೆ. ಇದು ಮುಂಭಾಗದ ಭಾಗವಾಗಿದೆ ಹಾಗೂ ಇದನ್ನು ಸಾಂಪ್ರದಾಯಿಕ ಪಲ್ಲವ ವಾಸ್ತುಶಿಲ್ಪ ಶೈಲಿಯಲ್ಲಿ ಕೆತ್ತಲಾಗಿದೆ. ಕೇಂದ್ರ ಕೊಠಡಿಯು ಸಣ್ಣ ಮುಖಮಂಟಪದಿಂದ (ಪ್ರವೇಶದ ಮುಖಮಂಟಪ) ಮುಂಭಾಗದಲ್ಲಿದೆ. ಇದು ಪಲ್ಲವ ಶೈಲಿಯಲ್ಲಿ ಸಿಂಹದ ನೆಲೆಗಳೊಂದಿಗೆ ಎರಡು ಕೆತ್ತಿದ ಕಂಬಗಳನ್ನು ಹೊಂದಿದೆ. [೧೧]
ವಾಸ್ತುಶಿಲ್ಪ
[ಬದಲಾಯಿಸಿ]ಮಂಟಪವು ಮಹಾಬಲಿಪುರಂನಲ್ಲಿರುವ ಪ್ರಮುಖ ಗುಹೆಗಳಲ್ಲಿ ಒಂದಾಗಿದೆ. ಇದು ದುರ್ಗಾ ದೇವಿಯ ಅವತಾರವೆಂದು ಪರಿಗಣಿಸಲ್ಪಟ್ಟಿರುವ ಮಹಿಷಾಸುರಮರ್ಧಿನಿ ದೇವಿಗೆ ಸಮರ್ಪಿತವಾಗಿದೆ. ಮಂಟಪವನ್ನು ಬೆಟ್ಟದ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಗುಹೆಯ ಪ್ರವೇಶದ್ವಾರವು ಮೂರು ಕೋಣೆಗಳ ಸಂಯೋಜನೆಯನ್ನು ಹೊಂದಿದೆ. [೧೨]
ಶಿವ
[ಬದಲಾಯಿಸಿ]ಕೇಂದ್ರದಲ್ಲಿನ ಪ್ರವೇಶದ್ವಾರವು ಅದರ ಪಾರ್ಶ್ವಗಳಲ್ಲಿ ರಕ್ಷಕರನ್ನು (ದ್ವಾರಪಾಲಕರು) ಚಿತ್ರಿಸುತ್ತದೆ. ಕೇಂದ್ರ ಕೊಠಡಿಯ ಹಿಂಭಾಗದ ಗೋಡೆಯು ಸೋಮಸ್ಕಂದ ಫಲಕದ ಕೆತ್ತನೆಯನ್ನು ಹೊಂದಿದೆ. ಈ ಫಲಕವು ಶಿವ ಮತ್ತು ಅವನ ಪತ್ನಿ ಪಾರ್ವತಿಯ ಚಿತ್ರಗಳನ್ನು ಅವರ ರಾಜಮನೆತನದ ಉಡುಪಿನಲ್ಲಿ ಕೆತ್ತಲಾಗಿದೆ. ಪ್ರತಿಯೊಬ್ಬರೂ ಕಿರೀಟವನ್ನು ಮತ್ತು ಇತರ ಆಭರಣಗಳನ್ನು ಧರಿಸುತ್ತಾರೆ ಹಾಗೂ ಅವರ ಮಗನಾದ ಸ್ಕಂದ ಅವರ ನಡುವೆ ಕುಳಿತಿದ್ದಾನೆ. ಈ ಫಲಕವು ನಂದಿ (ಶಿವನ ವಾಹನ) ಹಾಗೂ ಶಿವನ ಪರ್ವತದ ಕೆತ್ತನೆಯನ್ನು ಸಹ ತೋರಿಸುತ್ತದೆ. ಶಿವನ ಕಟ್ಟಾ ಭಕ್ತನಾದ ಚಂಡೇಶನನ್ನು ತ್ರಿಮೂರ್ತಿ ದೇವರುಗಳಾದ ಶಿವ, ಬ್ರಹ್ಮ ಮತ್ತು ವಿಷ್ಣುವಿನ ಕೆತ್ತಿದ ಚಿತ್ರಗಳ ಎಡಭಾಗದಲ್ಲಿ ಕೆತ್ತಲಾಗಿದೆ. ಅವರು ಶಿವ ಮತ್ತು ಪಾರ್ವತಿಯ ಮುಖ್ಯ ಚಿತ್ರದ ಹಿಂದೆ ನಿಂತಿರುವಂತೆ ತೋರಿಸಲಾಗಿದೆ. ತ್ರಿಮೂರ್ತಿ ದೇವರುಗಳ ಕೆತ್ತನೆಯು, ಶಿವ-ಪಾರ್ವತಿ ದಂಪತಿಗಳೊಂದಿಗೆ ಅವರೆಲ್ಲರೂ ಸಂತಸಗೊಂಡಿದ್ದಾರೆ ಎಂಬ ಭಾವನೆಯನ್ನು ನೀಡುತ್ತದೆ. ವೈಯಕ್ತಿಕ ಚಿತ್ರಣದಲ್ಲಿ ಬ್ರಹ್ಮನನ್ನು ನಾಲ್ಕು ತಲೆಗಳು ಮತ್ತು ನಾಲ್ಕು ಕೈಗಳಿಂದ ಕೆತ್ತಲಾಗಿದೆ. ಮೇಲಿನ ಕೈಗಳು ನೀರಿನ ಪಾತ್ರೆ ಮತ್ತು ಅಕ್ಷಮಾಲೆಯನ್ನು ಹಿಡಿದಿವೆ. ಕೆಳಗಿನ ಬಲಗೈಯನ್ನು ಶಿವನಿಗೆ ಶ್ಲಾಘಿಸುವ ಭಾವದಲ್ಲಿ ತೋರಿಸಲಾಗಿದೆ ಹಾಗೂ ಎಡಗೈ ಕಟಕ ಮುದ್ರೆಯಲ್ಲಿದೆ . ವಿಷ್ಣುವಿನ ಕೆತ್ತನೆಯನ್ನು ನಾಲ್ಕು ಕೈಗಳಿಂದ ಚಿತ್ರಿಸಲಾಗಿದೆ. ಚಕ್ರ ಮತ್ತು ಶಂಖವನ್ನು ಅವನ ಮೇಲಿನ ಕೈಗಳಲ್ಲಿ ಹಿಡಿದಿಟ್ಟುಕೊಳ್ಳಲಾಗುತ್ತದೆ. ಕೆಳಗಿನ ಎಡಗೈಯು ಶಿವನಿಗೆ ಮೆಚ್ಚುಗೆಯ ಸೂಚಕವನ್ನು ತೋರಿಸುತ್ತದೆ ಮತ್ತು ಕೆಳಗಿನ ಬಲಗೈ ಕಟಕ ಮುದ್ರೆಯಲ್ಲಿದೆ . ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಸೂರ್ಯನ ಚಿತ್ರವನ್ನು ಫಲಕದ ಮೇಲ್ಭಾಗದಲ್ಲಿ ಕೆತ್ತಲಾಗಿದೆ. ಎಡ ಕೋಣೆಯ ಹಿಂಭಾಗದ ಗೋಡೆಯ ಮೇಲೆ ಪ್ರತ್ಯೇಕವಾದ ಬ್ರಹ್ಮ ಫಲಕದ ಕೆತ್ತನೆಯು ಕಾಣಿಸಿಕೊಳ್ಳುತ್ತದೆ. ಆದರೆ ಪುರಾತತ್ತ್ವ ಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ ಮೂಲತಃ ವಿಷ್ಣುವಿನ ಫಲಕವನ್ನು ಆಯೋಜಿಸಲು ಉದ್ದೇಶಿಸಲಾದ ಶಿವನ ಫಲಕದೊಂದಿಗೆ ಬಲ ಕೋಣೆಯನ್ನು ಪುನರಾವರ್ತಿಸಲಾಗುತ್ತದೆ. ಈ ಗುಹೆಯಲ್ಲಿನ ಶಿವ ಫಲಕಗಳ ಪ್ರಾಬಲ್ಯಕ್ಕೆ ಸಂಬಂಧಿಸಿದ ಮತ್ತೊಂದು ವ್ಯಾಖ್ಯಾನವೆಂದರೆ ಆ ಸಮಯದಲ್ಲಿ ಆಳಿದ ರಾಜರ ಧಾರ್ಮಿಕ ಒಲವು ವೈಷ್ಣವರಿಂದ ಶೈವರಿಗೆ ಬದಲಾಯಿತು ಎಂಬುದು. [೧೩] ಹೆಚ್ಚುವರಿಯಾಗಿ ಈ ಗುಹೆಯಲ್ಲಿರುವ ಸೋಮಸ್ಕಂದ ಫಲಕವು ಧರ್ಮರಾಜ ರಥ, ತೀರ ದೇವಾಲಯ ಮತ್ತು ಅತಿರಣಚಂದ ಗುಹೆಯಲ್ಲಿ ಕೆತ್ತಿದ ಒಂದೇ ರೀತಿಯ ಫಲಕಗಳಿಗಿಂತ ವಿಭಿನ್ನವಾದ ವಾಸ್ತುಶಿಲ್ಪದ ಸಂಯೋಜನೆಯನ್ನು ಹೊಂದಿದೆ. ಪುರಾತತ್ತ್ವಜ್ಞರು ಇಲ್ಲಿರುವ ಫಲಕವನ್ನು ರಾಜಸಿಂಹನ ಆಳ್ವಿಕೆಯಲ್ಲಿ ರಚಿಸಲಾಗಿದೆ ಎಂದು ಸೂಚಿಸುತ್ತಾರೆ.
ಮಹಿಷಾಸುರಮರ್ಧಿನಿ
[ಬದಲಾಯಿಸಿ]ಗುಹೆಯಲ್ಲಿನ ಉತ್ತರ ಗೋಡೆಯು ವಿರೋಧಿಗಳಾದ ದುರ್ಗಾ ದೇವತೆ ಮತ್ತು ರಾಕ್ಷಸನಾದ ಮಹಿಷಾಸುರನ ಯುದ್ಧದ ದೃಶ್ಯವನ್ನು ಚಿತ್ರಿಸುವ ಉಬ್ಬುಚಿತ್ರವನ್ನು ಹೊಂದಿದೆ. ಈ ಫಲಕವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಕೆತ್ತನೆಯನ್ನು ಪಲ್ಲವರ ಕಾಲದ ಅತ್ಯುತ್ತಮ ರಚನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಯುದ್ಧದ ದೃಶ್ಯದಲ್ಲಿ ದುರ್ಗಾ ದೇವಿಯು ಎಂಟು ಕೈಗಳಿಂದ ಉಗ್ರರೂಪದ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಅವಳು ತನ್ನ ನಾಲ್ಕು ಬಲಗೈಗಳಲ್ಲಿ ಖಡ್ಗ (ಕತ್ತಿ), ಧನಸ್ಸು (ಬಿಲ್ಲು), ಬಾಣ, ಹಾಗೂ ಘಂಟೆಯನ್ನು (ಗಂಟೆ) ಹಿಡಿದಿದ್ದಾಳೆ. ಅವಳ ನಾಲ್ಕು ಎಡಗೈಗಳು ಪಾಶ, ಶಂಖ ಮತ್ತು ಕಠಾರಿಗಳನ್ನು ಪ್ರದರ್ಶಿಸುತ್ತವೆ. ಒಬ್ಬ ಪರಿಚಾರಕನು ದುರ್ಗೆಯ ತಲೆಯ ಮೇಲೆ ಛತ್ರವನ್ನು ( ಪರಾಸೋಲ್ ) ಹಿಡಿದಿದ್ದಾನೆ. ಅವಳು ತನ್ನ ಮಹಿಳಾ ಯೋಧರು ಮತ್ತು ಗಣಗಳ (ಕುಬ್ಜರು) ಸೈನ್ಯದೊಂದಿಗೆ ಯುದ್ಧಭೂಮಿಯಲ್ಲಿದ್ದಾಳೆ. ಅವಳು ತನ್ನ ಅನುಯಾಯಿಗಳೊಂದಿಗೆ, ರಾಕ್ಷಸ ಮಹಿಷನ ಮೇಲೆ ಬಾಣಗಳಿಂದ ಆಕ್ರಮಣ ಮಾಡುವುದನ್ನು ತೋರಿಸಲಾಗಿದೆ. ಮಹಿಷಾಸುರನು ಗದೆಯೊಂದಿಗೆ ಶಸ್ತ್ರಸಜ್ಜಿತನಾಗಿರುತ್ತಾನೆ. [೧೪] [೧೫]ಮಹಿಷಾಸುರನ ದಂತಕಥೆಯನ್ನು ಮಾರ್ಕಂಡೇಯ ಪುರಾಣದ ಭಾಗವಾಗಿರುವ ದೇವಿ ಮಾಹಾತ್ಮ್ಯ ಎಂದು ಕರೆಯಲ್ಪಡುವ ಶಕ್ತಿ ಸಂಪ್ರದಾಯಗಳ ಪ್ರಮುಖ ಪಠ್ಯಗಳಲ್ಲಿ ಹೇಳಲಾಗಿದೆ. ಸಾವರ್ಣಿಕ ಮನುವಿನ ಜನನದ ಕಥೆಯನ್ನು ಮಾರ್ಕಂಡೇಯ ಹೇಳುತ್ತಿರುವ ಅಧ್ಯಾಯದಲ್ಲಿ ಮಹಿಷಾಸುರನ ಕಥೆಯನ್ನು ಹೇಳಲಾಗಿದೆ. ಮಾರ್ಕಂಡೇಯ ಪುರಾಣದ ಪ್ರಕಾರ, ಮಹಿಷಾಸುರನ ಕಥೆಯನ್ನು ಎರಡನೇ ಮನ್ವಂತರದಲ್ಲಿ (ಸುಮಾರು ೧.೩ ಶತಕೋಟಿ ವರ್ಷಗಳ ಹಿಂದೆ, ವಿಷ್ಣು ಪುರಾಣದ ಪ್ರಕಾರ) ಮಹರ್ಷಿ ಮೇಧನು ಸೂರುತ್ ಎಂಬ ರಾಜನಿಗೆ ಹೇಳಿದ್ದಾನೆ. ಇದು ೨ ನೇ ಮನ್ವಂತರಕ್ಕೂ ಪ್ರಾಚೀನ ಕಾಲದಲ್ಲಿ ಸಂಭವಿಸಿದ ಘಟನೆಯಾಗಿದೆ. ಮಹಿಷಾಸುರನು ತನ್ನ ಬಾಹ್ಯ ರೂಪವನ್ನು ಬದಲಾಯಿಸಬಲ್ಲ ದುಷ್ಟ ಜೀವಿ ಎಂದು ವಿವರಿಸಲಾಗಿದೆ. [೧೬][೧೭] [೧೮][೧೭]
ವಿಷ್ಣು
[ಬದಲಾಯಿಸಿ]ಗುಹೆಯ ದಕ್ಷಿಣದ ಮುಖದಲ್ಲಿ ಅನಂತಶಯನ ಮುದ್ರೆಯಲ್ಲಿ ವಿಷ್ಣುವಿನ ಫಲಕವಿದೆ ( ಸರ್ಪದ ಹಾಸಿಗೆಯ ಮೇಲೆ ಒರಗಿರುವ ಭಂಗಿ ). ಅವನು ಎರಡು ಕೈಗಳಿಂದ ಆದಿಶೇಷ ಎಂದು ಕರೆಯಲ್ಪಡುವ ಐದು ತಲೆಯ ಸರ್ಪದ ಸುರುಳಿಯನ್ನು ಹಿಡಿದಿರುವಂತೆ ತೋರಿಸಲಾಗಿದೆ. ಇದು ವಿಷ್ಬುವಿನ ತಲೆಯ ಮೇಲೆ ಹೊದಿಕೆಯನ್ನು ರೂಪಿಸುತ್ತದೆ. ಮಧು ಮತ್ತು ಕೈಟಭ ಎಂಬ ಇಬ್ಬರು ರಾಕ್ಷಸರನ್ನು ವಿಷ್ಣುವಿನ ಪಾದಗಳ ಬಳಿ ಆಕ್ರಮಣಕಾರಿ ಕ್ರಮದಲ್ಲಿ ಕೆತ್ತಲಾಗಿದೆ ( ಗದೆಯಿಂದ ಶಸ್ತ್ರಸಜ್ಜಿತವಾಗಿದೆ ). ರಾಕ್ಷಸರು ಹಿಮ್ಮೆಟ್ಟುವ ಸ್ಥಿತಿಯಲ್ಲಿದ್ದಾರೆ. ಏಕೆಂದರೆ ಆದಿಶೇಷನು ಅದರ ಕವಚಗಳಿಂದ ಹೊರಹೊಮ್ಮುವ ಜ್ವಾಲೆಗಳೊಂದಿಗೆ ಅವರನ್ನು ಹಿಮ್ಮೆಟ್ಟುತ್ತಾನೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ವಿಷ್ಣು ಆದಿಶೇಷನನ್ನು ಸವರುತ್ತಿರುತ್ತಾನೆ. ಫಲಕದಲ್ಲಿ ಎರಡು ಗಣಗಳನ್ನು (ಕುಬ್ಜರು) ತೋರಿಸಲಾಗಿದೆ. ಕುಬ್ಜರು ವಿಷ್ಣುವಿನ ಆಯುಧಪುರುಷರು (ಅವನ ವ್ಯಕ್ತಿಗತ ಆಯುಧಗಳಾಗಿ). ಪುರುಷ ಗಣವನ್ನು ಶಂಖ ಅಥವಾ ಪಾಂಚಜನ್ಯ ಎಂದು ಕರೆಯಲಾಗುತ್ತದೆ ಮತ್ತು ಸ್ತ್ರೀ ಗಣವು ವಿಷ್ಣುವಿನ ಗದಾ ಕೌಮೋದಕಿಯಾಗಿದೆ. ಫಲಕದ ಕೆಳಗಿನ ತುದಿಯಲ್ಲಿ ಮೂರು ಚಿತ್ರಗಳಿವೆ; ಅವನ ಚಕ್ರ ಸುದರ್ಶನ; ಆಯುಧ-ಪುರುಷ ರೂಪದಲ್ಲಿ , ಬಲಭಾಗದಲ್ಲಿ ಅವನ ಖಡ್ಗ (ಕತ್ತಿ), ಮತ್ತು ಸ್ತ್ರೀ ಆಕೃತಿಯಲ್ಲಿ ಭೂದೇವಿ. [೧೯]ಈ ಕೆತ್ತನೆಯು ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾದ ದಂತಕಥೆಯನ್ನು ವಿವರಿಸುತ್ತದೆ, ಸೃಷ್ಟಿಯ ಸಮಯದಲ್ಲಿ ಅಸುರರಾದ ಮಧು ಮತ್ತು ಕೈಟಭರು ಬ್ರಹ್ಮನಿಂದ ವೇದಗಳನ್ನು ಕದ್ದರು ಮತ್ತು ಪ್ರಾಚೀನ ಸಾಗರದ ಆಳವಾದ ನೀರಿನಲ್ಲಿ ಸಂಗ್ರಹಿಸಿದರು ಎಂದು ಹೇಳುತ್ತದೆ. ವಿಷ್ಣುವು ವೇದಗಳನ್ನು ಉಳಿಸಬಲ್ಲ ಏಕೈಕ ದೇವರು ಆದ್ದರಿಂದ ಅವರು ಅವನ ಮೇಲೆ ದಾಳಿ ಮಾಡಲು ಬಯಸಿದರು. ಇದರಿಂದ ಆದಿಶೇಷನು ಕೋಪಗೊಂಡನು ಮತ್ತು ತನ್ನಿಂದ ಹೊರಹೊಮ್ಮುವ ಜ್ವಾಲೆಗಳಿಂದ ರಾಕ್ಷಸರ ಮೇಲೆ ಆಕ್ರಮಣ ಮಾಡುತ್ತಾನೆ. ಮಹಾವಿಷ್ಣು ಶೇಷನನ್ನು ಸಮಾಧಾನಪಡಿಸಿ ಹಯಗ್ರೀವ ಅವತಾರವನ್ನು ತೆಗೆದುಕೊಳ್ಳುತ್ತಾನೆ. ಅವನು ರಾಕ್ಷಸರನ್ನು ಕೊಂದು ಬ್ರಹ್ಮನಿಗೆ ವೇದಗಳನ್ನು ಹಿಂದಿರುಗಿಸುತ್ತಾನೆ. ಇದು ವಿಷ್ಣುವಿಗೆ ಮಧುಸೂದನ - ಮಧುವಿನ ಕೊಲೆಗಾರ ಮತ್ತು ಕೈಟಭಜಿತ್ - ಕೈಟಭನ ವಿಜಯಿ ಎಂಬ ವಿಶೇಷಣಗಳನ್ನು ನೀಡಲು ಕಾರಣವಾಗುತ್ತದೆ. ಮಧು ಮತ್ತು ಕೈಟಭರ ೨ ದೇಹಗಳು ೬ ಭಾಗಗಳಾಗಿ ಒಟ್ಟು ಇದು ಹನ್ನೆರಡು ತುಂಡುಗಳಾದವು (ಎರಡು ತಲೆಗಳು, ಎರಡು ಮುಂಡಗಳು, ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲುಗಳು). ಇವುಗಳು ಭೂಮಿಯ ಹನ್ನೆರಡು ಭೂಕಂಪನ ಫಲಕಗಳನ್ನು ಪ್ರತಿನಿಧಿಸುತ್ತವೆ ಎಂದು ಪರಿಗಣಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Madras literary society (1881). J.C. Morris (ed.). The Journal (afterw.) The Madras journal of literature and science (Public domain ed.). p. 98. Retrieved 18 March 2013.
- ↑ "General view of the entrance to the Varaha Cave Temple, Mamallapuram". British Library. Archived from the original on 2011-05-21. Retrieved 2008-11-18.
- ↑ Shobhna Gupta (2003). Monuments Of India. Har-Anand Publications. pp. 35–. ISBN 978-81-241-0926-7. Retrieved 7 February 2013.
- ↑ Rina Kamath (1 September 2000). Chennai. Orient Blackswan. pp. 124–. ISBN 978-81-250-1378-5. Retrieved 7 February 2013.
- ↑ Karen Schreitmüller; Mohan Dhamotharan; Beate Szerelmy (14 February 2012). Baedeker India. Baedeker. pp. 589–. ISBN 978-3-8297-6622-7. Retrieved 7 February 2013.
- ↑ "General view of the façade of the Yamapuri or Mahishasuramardhini Cave Temple, Mamallapuram". Online Gallery of British Library. Archived from the original on 4 ಮಾರ್ಚ್ 2016. Retrieved 23 October 2012.
- ↑ G. Jouveau-Dubreuil (1 December 1994). Pallava Antiquities – 2 Vols. Asian Educational Services. pp. 30–. ISBN 978-81-206-0571-8. Retrieved 3 January 2013.
- ↑ Trudy Ring; Robert M. Salkin; Sharon La Boda (1995). Asia and Oceania: International Dictionary of Historic Places. Taylor & Francis. pp. 912–. ISBN 978-1-884964-04-6. Retrieved 7 February 2013.
- ↑ Ayyar, P. V. Jagadisa (1982). South Indian Shrines: Illustrated. Asian Educational Services. pp. 157–. ISBN 978-81-206-0151-2. Retrieved 7 February 2013.
- ↑ "Arjuna's Penance". Lonely Planet. Retrieved 30 December 2012.
- ↑ "Mahabalipuram – The Workshop of Pallavas – Part II". Mahishasurmardini Cave Temple. puratattva.in. Archived from the original on 21 April 2012. Retrieved 23 February 2013.
- ↑ "General view of the façade of the Yamapuri or Mahishasuramardhini Cave Temple, Mamallapuram". Online Gallery of British Library. Archived from the original on 4 ಮಾರ್ಚ್ 2016. Retrieved 23 October 2012."General view of the façade of the Yamapuri or Mahishasuramardhini Cave Temple, Mamallapuram" Archived 2022-10-18 ವೇಬ್ಯಾಕ್ ಮೆಷಿನ್ ನಲ್ಲಿ.. Online Gallery of British Library. Retrieved 23 October 2012.
- ↑ "Mahabalipuram – The Workshop of Pallavas – Part II". Mahishasurmardini Cave Temple. puratattva.in. Archived from the original on 21 April 2012. Retrieved 23 February 2013."Mahabalipuram – The Workshop of Pallavas – Part II". Mahishasurmardini Cave Temple. puratattva.in. Archived from the original on 21 April 2012. Retrieved 23 February 2013.
- ↑ Karen Schreitmüller; Mohan Dhamotharan; Beate Szerelmy (14 February 2012). Baedeker India. Baedeker. pp. 589–. ISBN 978-3-8297-6622-7. Retrieved 7 February 2013.Karen Schreitmüller; Mohan Dhamotharan; Beate Szerelmy (14 February 2012). Baedeker India. Baedeker. pp. 589–. ISBN 978-3-8297-6622-7. Retrieved 7 February 2013.
- ↑ "Mahabalipuram – The Workshop of Pallavas – Part II". Mahishasurmardini Cave Temple. puratattva.in. Archived from the original on 21 April 2012. Retrieved 23 February 2013."Mahabalipuram – The Workshop of Pallavas – Part II". Mahishasurmardini Cave Temple. puratattva.in. Archived from the original on 21 April 2012. Retrieved 23 February 2013.
- ↑ Fuller, Christopher John (2004). The Camphor Flame: Popular Hinduism and Society in India. Princeton University Press. pp. 108–109. ISBN 0-691-12048-X.
- ↑ ೧೭.೦ ೧೭.೧ Amazzone, Laura (2012). Goddess Durga and Sacred Female Power. University Press of America. pp. 96–97. ISBN 978-0-7618-5314-5.
- ↑ Zimmer, Heinrich (1990). Myths and Symbols in Indian Art and Civilization. Motilal Banarsidass. pp. 195–198. ISBN 978-81-208-0751-8.
- ↑ "Mahabalipuram – The Workshop of Pallavas – Part II". Mahishasurmardini Cave Temple. puratattva.in. Archived from the original on 21 April 2012. Retrieved 23 February 2013."Mahabalipuram – The Workshop of Pallavas – Part II". Mahishasurmardini Cave Temple. puratattva.in. Archived from the original on 21 April 2012. Retrieved 23 February 2013.