ಟೆಲ್ ಅಚ್ಚನ
ಟೆಲ್ ಅಚ್ಚನ -ಸಿರಿಯ ಮತ್ತು ತುರ್ಕಿ ಗಡಿಯ ಉತ್ತರಕ್ಕೆ ಅಮುಕ ಮೈದಾನದಲ್ಲಿ ಓರಾಂಟೀಸ್ ನದಿಯ ದಡದಲ್ಲಿ ಇರುವ ಪ್ರಾಗೈತಿಹಾಸಿಕ ನಿವೇಶನ.
ಮಧ್ಯ ಏಷ್ಯದಿಂದ ಯೂರೋಪ್ ಮತ್ತು ಮೆಡಿಟರೇನಿಯನ್ ಪ್ರದೇಶಗಳಿಗೆ ಹೋಗುವ ವ್ಯಾಪಾರ ಮಾರ್ಗಗಳ ಸಂಧಿಸ್ಥಾನದಲ್ಲಿದ್ದುದರಿಂದ ಪ್ರಾಚೀನ ಕಾಲದಲ್ಲಿ ಪ್ರಾಮುಖ್ಯ ಪಡೆದಿತ್ತು. ಅಮೇನಸ್ ಪರ್ವತದ ತಪ್ಪಲಿನಲ್ಲಿ ಬೆಳೆಯುತ್ತಿದ್ದ ಸೆಡಾನ್ ಮರದ ದಿಮ್ಮಿಗಳನ್ನು ಮೆಸಪೊಟೇಮಿಯಕ್ಕೆ ರಫ್ತು ಮಾಡಿ ಇದು ಅಪಾರ ಐಶ್ವರ್ಯ ಗಳಿಸಿತ್ತು. ಬ್ರಿಟಿಷ್ ವಸ್ತುಸಂಗ್ರಹಾಲಯದ ಪರವಾಗಿ ಲಿಯೋನಾರ್ಡ್‍ವೂಲಿ 1937-49ರ ಅವಧಿಯಲ್ಲಿ ನಡೆಸಿದ ಉತ್ಖನನಗಳಿಂದ ಕ್ರಿ. ಪೂ. 3400ರಿಂದ ಕ್ರಿ.ಪೂ. 1200ರ ಅವಧಿಯಲ್ಲಿ ಇಲ್ಲಿ ಕಟ್ಟಿದ ಕಟ್ಟಡಗಳ 17 ಘಟ್ಟಗಳು ಬೆಳಕಿಗೆ ಬಂದಿವೆ. ಮೆಸಪೊಟೇಮಿಯ ಸಂಸ್ಸ್ಕೃತಿಯ ಪ್ರಭಾವವನ್ನು ಇಲ್ಲಿಯ ಕಟ್ಟಡಗಳಲ್ಲಿ ಕಾಣಬಹುದು. ಇಲ್ಲಿಯ ಅರಮನೆ ಮತ್ತು ದೇವಾಲಯಗಳಲ್ಲಿ ಕ್ಯೂನಿಫಾರಂ ಲಿಪಿಯ ಲೇಖಗಳು ದೊರಕಿವೆ. ಈ ನಗರದ ಹೆಸರು ಅಲಾಲಕ್ ಎಂದು ಇತ್ತು. ಅಲೆಪ್ಟೊ ನಗರವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಅಮರೈಟರ ಆಳ್ವಿಕೆಗೆ ಇದು ಒಳಪಟ್ಟಿತ್ತು. ಯಾರಿಮ್ ಲಿಮ್ ಎಂಬ ಆಗಿನ ದೊರೆ ಬ್ಯಾಬಿಲಾನಿನ ಪ್ರಸಿದ್ಧ ದೊರೆ ಹಾಮುರಾಬಿಯ ಸಮಕಾಲೀನ. ನಗರದ ಬಗ್ಗೆ ಇಷ್ಟು ವಿಷಯ ಅಲ್ಲಿಯ ಶಾಸನಗಳಿಂದ ಗೊತ್ತಾಗುತ್ತದೆ. ಅನಂತರ ಸ್ವಲ್ಪ ಕಾಲ ಇದು ಈಜಿಪ್ಟ್ ಮತ್ತು ಹುರಿಯನ್ ರಾಜ್ಯಗಳ ವಶದಲ್ಲಿತ್ತು,
ಇಲ್ಲಿ ದೊರೆತ ಇದ್ರಿ-ಮಿ ಎಂಬ ದೊರೆಯ ಪ್ರತಿಮೆಯ ಮೇಲೆ ಕೆತ್ತಿರುವ, ಅವನ ಆತ್ಮಕಥನವನ್ನು ನಿರೂಪಿಸುವ, ಲೇಖ ಗಮನಾರ್ಹ.
ಸ್ವಲ್ಪಕಾಲಾನಂತರ ಇದು ಹಿಟ್ಟೈಟ್ ಸಾಮ್ರಾಜ್ಯದ ವಶವಾಯಿತು. ಕ್ರಿ.ಪೂ. 1194ರಲ್ಲಿ ಸಮುದ್ರಜನಾಂಗಗಳ ದಾಳಿಗೆ ಒಳಗಾಗಿ ಈ ನಗರ ನಾಶವಾಯಿತು.