ಐರೋಪ್ಯ ಕಲೆ
ಐರೋಪ್ಯ ಕಲೆ: ಯುರೋಪಿನ ಶಿಲ್ಪ ಮತ್ತು ಚಿತ್ರಕಲೆಗಳ ಸ್ಥೂಲ ರೂಪರೇಷೆಗಳನ್ನು ಗುರುತಿಸುವುದೇ ಈ ಲೇಖನದ ಉದ್ದೇಶ. ಏಷ್ಯ, ಅಮೆರಿಕ, ಆಫ್ರಿಕ ಮತ್ತು ಆಸ್ಟ್ರೇಲಿಯಗಳಲ್ಲಿನಂತೆ ಯುರೋಪಿನಲ್ಲಿಯೂ ಪ್ರಾಚೀನ ಕಲೆ ಅತಿಪುರಾತನವಾದುದೇ. ಹಿಮಶಿಲಾಯುಗ ಕಳೆದು ನೆಲ ಬಾಳಿಗೆ ಹಸನಾಗುತ್ತಿದ್ದಂತೆ ಉತ್ತರ ಯುರೋಪಿನಿಂದ ಮಧ್ಯಯುರೋಪಿಗೂ ಅಲ್ಲಿಂದ ಸುತ್ತಲೂ ಹರಡಿದ ಮಾನವ ಬುಡಕಟ್ಟುಗಳ ದೈನಂದಿನ ಅಗತ್ಯಗಳು, ಆಶೋತ್ತರಗಳು, ಶಕ್ತಿ ಸಾಮಥರ್ಯ್‌ಗಳು-ಇವುಗಳಿಗೆ ಅನುಸಾರವಾಗಿ ನಾಗರಿಕತೆ, ಸಂಸ್ಕೃತಿ, ಕಲೆ ಮೊದಲಾದವು ಹರಡಿದುವು. ಮೇಲಿಂದ ಮೇಲೆ ಗುಂಪುಗುಂಪುಗಳಲ್ಲಿ ನಡೆದ ಜಗಳ, ಯುದ್ಧ,ದಾಳಿಗಳಿಂದಾಗಿ ಜೀವನ ಅಲ್ಲೋಲಕಲ್ಲೋಲವಾಯಿತು. ಇದ್ದ ನಾಗರಿಕತೆ ಅಳಿದು ಹೊಸ ನಾಗರಿಕತೆ ಬೆಳೆದು ಅಭಿವೃದ್ಧಿಗೊಂಡಿತು. ಇದರ ಅನೇಕ ವಿವರಗಳನ್ನು ಯುರೋಪಿನ ಪ್ರಾಗಿತಿಹಾಸ ಎಂಬ ಸಚಿತ್ರ ಲೇಖನದಲ್ಲಿ ನೋಡಬಹುದು.
ಗ್ರೀಕ್ ಶೈಲಿ
[ಬದಲಾಯಿಸಿ]ಯುರೋಪಿನ ಇಂದಿನ ನಾಗರಿಕತೆ, ಸಂಸ್ಕೃತಿ ಹಾಗೂ ಕಲೆಗಳಿಗೆ ಮೂಲಸ್ಥಾನವಾದ ಗ್ರೀಸ್ ದೇಶದ ಕಲೆ ಎರಡು ಸಾವಿರ ವರ್ಷಗಳಿಗೂ ಹಳೆಯದು. ಪ್ರ.ಶ.ಪು. ಸು. 1000ದಲ್ಲಿ ಡೋರಿಯನರು ಗ್ರೀಸನ್ನು ಆಕ್ರಮಿಸಿದರು. ಆಗಿನಿಂದ ಗ್ರೀಕ್ ಶಿಲ್ಪ ಬೆಳೆಯಿತೆನ್ನಬಹುದು. ಅಲ್ಲಿಂದ ಪ್ರ.ಶ.ಪು. 10-6ನೆಯ ಶತಮಾನದವರೆಗೆ ಅದು ಬೆಳೆದು ಬಲಗೊಂಡಿತು. ಒಲಿಂಪಿಯದ ಪ್ರಾಚೀನ ದೇವಾಲಯಗಳಲ್ಲಿ ಡೋರಿಕ್ ಮಾದರಿಗಳನ್ನು ಗುರುತಿಸಬಹುದು. ಗ್ರೀಕ್ ಕಲೆಯ ವೈಭವಾವಶೇಷಗಳನ್ನು ಅಥೆನ್ಸ್ ನಗರದಲ್ಲಿ ಇಂದಿಗೂ ಕಾಣಬಹುದು. ಶಿಲ್ಪ ತಂತ್ರದಲ್ಲಿ ಚಾಚೂ ತಪ್ಪಿಲ್ಲದಂತೆ ಅಷ್ಟೂ ಖಚಿತವಾಗಿ ನಿರ್ಮಾಣಗೊಂಡ ಕಟ್ಟಡವೆಂದರೆ 2,000 ವರ್ಷಗಳ ಹಿಂದೆ ನಿರ್ಮಾಣವಾದ ಪಾರ್ಥೆನಾನ್ ದೇವಾಲಯ. ಪ್ರಪಂಚದಲ್ಲಿ ಇಂಥ ಶುದ್ಧ ಶಿಲ್ಪ ತಂತ್ರದ ಕಟ್ಟಡಗಳು ಬಹಳ ಇಲ್ಲ. ಈಗ ದೇವಾಲಯ ಶಿಥಿಲಗೊಂಡಿದೆಯಾದರೂ ಅದರ ವೈಖರಿಯನ್ನು ಇಂದಿಗೂ ಗುರುತಿಸಬಹುದು. ಬುದ್ಧಿ ಕೌಶಲಕ್ಕೆ ಅಧಿದೇವತೆಯೆನಿಸಿದ ಅಥೀನೆ ಪಾರ್ಥೆನೋಸ್ ದೇವತೆಯ ಹೆಸರಿನಲ್ಲಿ ಇದನ್ನು ನಿರ್ಮಿಸಲಾಯಿತು. ಅಥೆನ್ಸಿನ ಅಕ್ರೊಪೋಲಿಸ್ ಬೆಟ್ಟದ ನೆತ್ತಿಯಲ್ಲಿರುವ ಆ ಭವ್ಯ ಕಟ್ಟಡದ ಅವಶೇಷವನ್ನು ವೀಕ್ಷಿಸಲು ಇಂದಿಗೂ ವಿಶ್ವದ ನಾನಾ ಭಾಗಗಳಿಂದ ಪ್ರೇಕ್ಷಕರು ಬರುತ್ತಿರುತ್ತಾರೆ. ಈ ದೇವಾಲಯಗಳ ಮುಖ್ಯ ಆಕರ್ಷಣೆ ಎಂದರೆ ಇಲ್ಲಿನ ಕಂಬಸಾಲು. ಇವು ಡೋರಿಕ್ ಮಾದರಿಯ ಗಂಡು ಶೈಲಿಯವಾಗಿವೆ. ಈ ಡೋರಿಕ್ ಶೈಲಿ ಸುಮಾರು ಒಂದೂವರೆ ಸಾವಿರ ವರ್ಷ ಜನಪ್ರಿಯವಾಗಿತ್ತು. ಅಲಂಕರಣ ಕಡಿಮೆಯಾದರೂ-ಅದರಿಂದಲೇ ಅಂಥ ಶೈಲಿಯನ್ನು ಗಂಡುಶೈಲಿ ಎಂಬುದು ನೋಟಕ್ಕೆ ಬಲು ಸೊಗಸಾಗಿರುವ ಈ ಕಂಬಗಳನ್ನು ನೆಲದಲ್ಲಿ ನೆಟ್ಟಿಲ್ಲ. ಇವು ಸುಮ್ಮನೆ ಎತ್ತರದ ವೇದಿಕೆಯ ಮೇಲೆ ನಿಂತಿವೆ, ಅಷ್ಟೆ. ಅಲ್ಲದೆ ಇವು ಬುಡದಲ್ಲಿ ದಪ್ಪವಾಗಿದ್ದು ಮೇಲೆ ಹೋಗುತ್ತ ಹೋಗುತ್ತ ತೆಳುವಾಗುತ್ತದೆ. ಒಂದೊಂದು ಕಂಬವನ್ನೂ ಎರಡು ಮೂರು ದಪ್ಪಕಲ್ಲುಗಳಿಂದ ಮಾಡಿದ್ದಾರಾದರೂ ಮಧ್ಯದ ಬೆಸುಗೆ ಎಲ್ಲೂ ಕಾಣದು. ಒಂದೇ ಕಲ್ಲಿನ ಕಂಬದಂತೆ ಕಾಣುತ್ತ ಅವು ಪ್ರೇಕ್ಷಕರನ್ನು ದಂಗುಬಡಿಸುತ್ತವೆ. ಗ್ರೀಕರಿಗೆ ಶಿಲ್ಪದಲ್ಲಿ ಅತಿ ಸುಂದರವಾದುದನ್ನು ಕಲ್ಪಿಸುವ ಕಾಣ್ಕೆ ಸಿದ್ಧಿಸಿತ್ತು. ಆದ್ದರಿಂದಲೇ ಅವರು ಅಂಥ ಅದ್ಭುತ ವಾಸ್ತುಶಿಲ್ಪಗಳನ್ನು ನಿರ್ಮಿಸಿದರು. ಅವರಾದ ಮೇಲೆ ಅನೇಕರು ಡೋರಿಕ್ ಮೂಲ ಮಾದರಿಯನ್ನು ಅಲ್ಪಸ್ವಲ್ಪ ವ್ಯತ್ಯಾಸ ಮಾಡಿ ಹೊಸ ಶೈಲಿಗಳನ್ನು ರೂಪಿಸಲು ಯತ್ನಿಸಿದರಾದರೂ ಯಾರ ಮಾರ್ಪಾಟೂ ಮೂಲ ಶೈಲಿಯಷ್ಟು ಸುಂದರವಾಗಿಲ್ಲ. ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದಿನ ಗ್ರೀಕ್ ದೊರೆ ಪೆರಿಕ್ಲೀಸನ ಕಾಲವನ್ನು ಗ್ರೀಸಿನ ಸ್ವರ್ಣಯುಗವೆನ್ನುತ್ತಾರೆ. ಅಂದಿನ ದೇವಾಲಯಗಳು, ದೇವತಾಮೂರ್ತಿಗಳು, ಇತರ ಬೃಹದ್ಭವನಗಳು, ಕೋಟೆಕೊತ್ತಳಗಳು, ರಸ್ತೆಗಳು, ಸೇತುವೆಗಳು, ಗೋಪುರಗಳು-ಇವು ಈಗ ಅಳಿದು ಹೋಗಿದ್ದರೂ ಹಿಂದೆ ಇದ್ದವೆನ್ನಲು ಮಾಹಿತಿಯನ್ನೊದಗಿಸುವಷ್ಟು ಮಟ್ಟಿಗೆ ಉಳಿದುಬಂದಿವೆ.[೧]
ಗ್ರೀಕ್ ಶೈಲಿಯ ಹಲವು ಮಾದರಿಗಳನ್ನು ಈ ಕೆಳಗೆ ಕಾಣಬಹುದು.
-
The Euphiletos Painter Panathenaic prize amphora; 530 BC; painted terracotta; height: 62.2 cm; Metropolitan Museum of Art (New York City)
-
The Parthenon on the Athenian Acropolis, the most iconic Doric Greek temple built of marble and limestone between circa 460-406 BC, dedicated to the goddess Athena[೨]
-
Mirror with a support in the form of a draped woman; mid-5th century BC; bronze; height: 40.41 cm; Metropolitan Museum of Art
-
The Grave relief of Thraseas and Euandria; 375-350 BC; Pentelic marble; height: 160 cm, width: 91 cm; Pergamon Museum (Berlin)
-
Volute krater; 320-310 BC; ceramic; height: 1.1 m; Walters Art Museum (Baltimore, US)
-
Statuette of a draped woman; 2nd century BC; terracotta; height: 29.2 cm; Metropolitan Museum of Art
-
Venus de Milo; 130–100 BC; marble; height: 203 cm (80 in); Louvre
-
Mosaic which represents the Epiphany of Dionysus; 2nd century AD; from the Villa of Dionysus (Dion, Greece); Archeological Museum of Dion
-
Illustrations of examples of ancient Greek ornaments and patterns, drawn in 1874
ವಾಸ್ತುಶಿಲ್ಪ
[ಬದಲಾಯಿಸಿ]ಗ್ರೀಕರು ತಮ್ಮ ವಾಸ್ತುಶಿಲ್ಪದಲ್ಲಿ ಗಾರೆಯನ್ನು ಬಳಸುತ್ತಿರಲಿಲ್ಲ. ಕಲ್ಲುಗಳನ್ನೇ ಅಚ್ಚುಕಟ್ಟಾಗಿ ಕತ್ತರಿಸಿ ಜೋಡಿಸಿ ಕಟ್ಟಡಗಳನ್ನು ಕಟ್ಟುತ್ತಿದ್ದರು. ಚಿತ್ತಾರಗಳಿಗೆ ಹೊಳಪನ್ನು ಕೊಡುತ್ತಿದ್ದರಲ್ಲದೆ ವಿವಿಧ ಬಣ್ಣಗಳನ್ನು ಬಳಸುತ್ತಿದ್ದರು. ಗ್ರೀಕ್ ಸ್ವಾಸ್ಥ್ಯಗಳಲ್ಲಿ ಪ್ರಾರಂಭವಾದ ಅಯೋನಿಕ್ ಶೈಲಿ ಕ್ರಮೇಣ ಪ್ರ.ಶ.ಪು.ಸು.500ರಲ್ಲಿ ಗ್ರೀಸನ್ನು ಪ್ರವೇಶಿಸಿತು. ಇದನ್ನು ಅಥೆನ್ಸಿನ ಎರೆಕ್ತಿಯಂ ದೇವಾಲಯದಲ್ಲಿ ಗುರುತಿಸಬಹುದು. ಗ್ರೀಕ್ ಕಲಾಪರಂಪರೆಯಲ್ಲಿ ಅತಿ ನವೀನವೆನಿಸಿದ ಕಾರಿಂಥಿಯನ್ ಶೈಲಿಯ ಬಳಕೆ ಅಷ್ಟಾಗಿ ಗ್ರೀಸಿನಲ್ಲಿ ಕಂಡುಬರದು. ಅಧಿಕಾರ ಗ್ರೀಸಿನಿಂದ ಏಷ್ಯ ಮೈನರಿಗೆ ವರ್ಗಾವಣೆಯಾದ ಮೇಲೆ (ಪ್ರ.ಶ.ಪು. 3ನೆಯ ಶತಮಾನ) ಹೆಲೆನಿಸ್ಟಿಕ್ ವಾಸ್ತುಶಿಲ್ಪಕಲೆ ಮೊದಲಾಯಿತೆನ್ನಬಹುದು. ನಗರರಚನೆಯ ಪ್ರಾಮುಖ್ಯ ಮತ್ತು ಸಂಕೀರ್ಣ ರಚನಾವಿಧಾನಗಳು ಆಗ ಮುಖ್ಯವೆನಿಸಿದುವು.ಗ್ರೀಕ್ ಶಿಲ್ಪದಲ್ಲಿ ಸಹಜತೆಗೆ ಗಮನಕೊಡಲಾಗಿದೆ. ಅವರು ಕೆತ್ತಿದ ದೇವತಾ ವಿಗ್ರಹಗಳು ಆದರ್ಶ ಸ್ತ್ರೀಪುರುಷರ ದೇಹರಚನೆ, ಸೌಂದರ್ಯಗಳನ್ನುಳ್ಳವಾಗಿವೆ. ಅಪೊಲೊ, ಅಥೀನ, ವೀನಸ್, ಅಲೆಕ್ಸಾಂಡರ್ ಮೊದಲಾದವರ ಮೂರ್ತಿಗಳು ಇದಕ್ಕೆ ಒಳ್ಳೆಯ ಉದಾಹರಣೆ. ಪ್ರ.ಶ.ಪು. 500-300ರ ವರೆಗಿನ ಕಾಲದಲ್ಲಿ ಪ್ರಸಿದ್ಧರಾದ ಶಿಲ್ಪಿಗಳೆಂದರೆ ಪ್ರಾಕ್ಸಿಟಿಲಿಸ್, ಲಿಸಿಪಸ್, ಮಿರಾನ್ ಕ್ರಿಸಿಲಾಸ್, ಟೆಮೋತಿಯಸ್, ಬ್ರಯಾಕ್ಸಿಸ್. ವರ್ಣಚಿತ್ರಕಾರರೆಂದರೆ ಅಪೊಲೊಡೋರಸ್, ಜ್ಯೂóಕ್ಸಿಸ್, ಪಾರ್ಥಾಸಿಯಸ್ (ನೋಡಿ- ಅಥೆನ್ಸ್; ಗ್ರೀಕ್-ಕಲೆ,-ವಾಸ್ತು,-ಶಿಲ್ಪ).
ರೋಮನ್ ಮಾದರಿ
[ಬದಲಾಯಿಸಿ]ಗ್ರೀಕರಂತೆ ರೋಮನರೂ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ವೈಭವದಿಂದ ಹಲವು ಶತಮಾನಗಳ ಕಾಲ ಯುರೋಪಿನ ಬಹು ಭಾಗವನ್ನು ಆಳಿದರು. ಅವರ ಶಿಲ್ಪ ಹಾಗೂ ಕಲೆಗೆ ಸ್ಫೂರ್ತಿ ದೊರೆತದ್ದು ನೆರೆದೇಶವಾದ ಗ್ರೀಸಿನಿಂದ. ದಕ್ಷಿಣ ಇಟಲಿ ಮತ್ತು ಸಿಸಿಲಿಗಳ ಮಾದರಿಗಳನ್ನು ಅವರು ಅನುಸರಿಸಿದಂತೆ ತೋರುತ್ತದೆ. ಅನಂತರ ನೇರವಾಗಿ ಗ್ರೀಸಿನಿಂದಲೂ ಹೆಲೆನಿಸ್ಟಿಕ್ ಪುರ್ವರಾಷ್ಟ್ರಗಳಿಂದಲೂ ಅವರು ಅನುಸರಿಸಿದರೆನ್ನಬಹುದು. ಇಟ್ರುಸ್ಕನರಿಂದ ಕಟ್ಟಡ ವಿನ್ಯಾಸದಲ್ಲಿ ನಿಜವಾದ ಕಮಾನು, ಕಮಾನು ಸರಣಿ ಮತ್ತು ಗುಮ್ಮಟದ ಬಳಕೆಯನ್ನು ಅನುಕರಿಸಲಾಯಿತು. ಪ್ರ.ಶ.ಪು.ಸು. 2ನೆಯ ಶತಮಾನದ ಹೊತ್ತಿಗಾಗಲೆ ಜಲ್ಲಿಕಲ್ಲಿನ ಗಾರೆ ಬಳಕೆಗೆ ಬಂದದ್ದರಿಂದ ವಾಸ್ತುಶಿಲ್ಪದಲ್ಲಿ ಅಗಾಧ ಬದಲಾವಣೆಗಳಾದುವು. ಕಮಾನಿನ ಬಳಕೆ ಹೆಚ್ಚಿ ಕಂಬ ಸಾಲುಗಳ ಅಲಂಕರಣಕ್ಕೆ ಎಡೆಯಾಯಿತು. ಗೃಹಗಳ ಉದ್ದಗಲಗಳು ಹೆಚ್ಚಿದವು. ಪ್ರಾಚೀನ ರೋಮನ್ ಶಿಲ್ಪತಂತ್ರಕ್ಕೆ ಈಗಿರುವ ಉದಾಹರಣೆಗಳೆಂದರೆ ಅವರು ರೋಮಿನ ಹೊರವಲಯದಲ್ಲಿ ನಿರ್ಮಿಸಿದ ಕಲ್ಲಿನ ಮೇಲು ಕಾಲುವೆಗಳ ಉಳಿಕೆಗಳು ಪ್ರ.ಶ.ಪು.100 ಪ್ರ.ಶ. 300ರವರೆಗಿನ ಕಾಲವನ್ನು ರೋಮನರ ಉಚ್ಛ್ರಾಯ ಕಾಲವೆನ್ನಬಹುದು. ಹಸಿ ಇಟ್ಟಿಗೆಗಳನ್ನೇ ಕಟ್ಟಡಗಳಿಗೆ ಬಳಸುತ್ತಿದ್ದರಾದರೂ ಗಾರೆಯ ಗೋಡೆಗಳ ಹೊರಮುಖಕ್ಕೆ ಸುಟ್ಟ ಇಟ್ಟಿಗೆಗಳನ್ನು ಬಳಸುವ ವಾಡಿಕೆ ಹೆಚ್ಚಿತು. ಮುಖ್ಯವಾದ ಕಟ್ಟಡಗಳಿಗೆ ಹೊರಮೈ ನಾಜೂಕಿಗಾಗಿ ನಯಗಾರೆಯನ್ನು ಉಜ್ಜುವ ವಾಡಿಕೆ ಹಿಂದಿನಿಂದ ಇದ್ದದ್ದೆ. ಕಮಾನು ಸರಣಿಗಳನ್ನು ವಿಧವಿಧವಾಗಿ ಬಳಸಿಕೊಳ್ಳಲಾಯಿತು. ಟ್ರಾಜನ್ ಮಹಾರಾಜನ ಕಾಲವನ್ನು ರೋಮನ್ ಶಿಲ್ಪದ ಉತ್ಕೃಷ್ಟ ಕಾಲವೆನ್ನಬಹುದು (98-117). ಗ್ರೀಕ್ ಮಾದರಿಯ ಕುಸುರಿ ಕೆಲಸವಿಲ್ಲದಿದ್ದರೂ ಎಲ್ಲ ಕಾಲದಲ್ಲೂ ರೋಮನರು ತಮ್ಮ ವಾಸ್ತುಕಲೆಯಲ್ಲಿ ವೈಭವಕ್ಕೂ ಅನುಕೂಲಗಳಿಗೂ ಗಮನವಿತ್ತಿರುವುದನ್ನು ಗುರುತಿಸಬಹುದು. ನಗರ ಮಧ್ಯದಲ್ಲಿನ ಸಾರ್ವಜನಿಕ ಕ್ಷೇತ್ರಗಳಾದ ಚಾವಡಿಗಳನ್ನು ಇನ್ನೂ ಹೆಚ್ಚು ವಿಸ್ತಾರವಾಗಿ, ಹೆಚ್ಚು ಸುಂದರವಾಗಿ ಕಟ್ಟುವ ಕಲೆ ಕ್ರಮೇಣ ಬೆಳೆದು ಬಂತು. ರೋಮನರ ಉತ್ಕೃಷ್ಟ ಕಲಾ ಮಾದರಿಗಳೆಂದರೆ ಅವರು ವಿಶೇಷವಾಗಿ ನಿರ್ಮಿಸಿರುವ ಬಸಿಲಿಕಗಳು, ಸ್ನಾನಗೃಹಗಳು, ಅರ್ಧಚಂದ್ರಾಕಾರದ ಪೀಠಪಂಕ್ತಿಯುಳ್ಳ ನಾಟಕ ಮಂದಿರಗಳು, ವಿಜಯ ಸ್ಮಾರಕಗಳಾದ ಬೃಹದ್ಕಮಾನುಗಳು. ನಗರವಾಸಿಗಳಾದ ಶ್ರೀಮಂತರು ಬಿಡುವಿನ ದಿನಗಳನ್ನು ವಿರಾಮವಾಗಿ ಹಳ್ಳಿಗಾಡಿನಲ್ಲಿ ಕಳೆಯಲು ತಮಗಾಗಿ ದೂರದ ಪ್ರದೇಶಗಳಲ್ಲಿ ಕಟ್ಟಿಕೊಂಡ ವಿಹಾರ ಗೃಹಗಳು (ವಿಲ್ಲ) ಅವರ ಸೂಕ್ಷ್ಮ ಸೌಂದರ್ಯಭಿರುಚಿಗೂ ಅನುಕೂಲ ದೃಷ್ಟಿಗೂ ಸಾಕ್ಷಿಯಾಗಿವೆ.[೩]
ರೋಮನ್ ವಾಸ್ತುಶಿಲ್ಪದ ಕೆಲವು ಮಾದರಿಗಳನ್ನು ಈ ಕೆಳಗೆ ಕಾಣಬಹುದು.
-
Bronze statuette of a philosopher on a lamp stand; late 1st century BC; bronze; overall: 27.3 cm; weight: 2.9 kg; Metropolitan Museum of Art (New York City)
-
Restoration of a fresco from an Ancient villa bedroom; 50-40 BC; dimensions of the room: 265.4 x 334 x 583.9 cm; Metropolitan Museum of Art (New York City)
-
Calyx-krater with reliefs of maidens and dancing maenads; 1st century AD; Pentelic marble; height: 80.7 cm; Metropolitan Museum of Art
-
Panoramic view of the Pantheon (Rome), built between 113 and 125
-
Head of a goddess wearing a diadem; 1st–2nd century; marble; height: 23 cm; Metropolitan Museum of Art
-
Couch and footstool; 1st–2nd century AD; wood, bone and glass; couch: 105.4 × 76.2 × 214.6 cm; Metropolitan Museum of Art
-
Sarcophagus with Apollo, Minerva and the Muses; circa 200 AD; from Via Appia; Antikensammlung Berlin (Berlin)
-
Sarcophagus with festoons; 200–225; marble; 134.6 x 223.5 cm; Metropolitan Museum of Art
-
Triumph of Neptune standing on a chariot pulled by two sea horses; mid-3rd century; Sousse Archaeological Museum (Tunisia)
-
The Theseus Mosaic; 300-400 AD; marble and limestone pebbles; 4.1 x 4.2 m; Kunsthistorisches Museum (Vienna, Austria)
ಚಿತ್ರಕಲೆ
[ಬದಲಾಯಿಸಿ]ಚಿತ್ರಕಲೆಯಲ್ಲಿ ಮೊದಲ ಹಂತವೆನಿಸಿದ ಇಟ್ರುಸ್ಕನ್ ಶೈಲಿಯಲ್ಲಿ ಪ್ರಾಚೀನ ಗ್ರೀಸಿನ ಅನುಕರಣೆ ಎದ್ದು ಕಾಣುತ್ತದಾದರೂ ಸ್ಥಳೀಯವಾದ ವರ್ಣಾಲಂಕರಣ ಹಾಗೂ ವೈಭವಗಳು ಗಮನಾರ್ಹವಾಗಿವೆ. ಬರಬರುತ್ತ ಪ್ರ.ಶ.ಪು. ಸು.400 ರಿಂದ ಈಚೆಗೆ ಗ್ರೀಕ್ ಶಿಷ್ಟ ಮಾದರಿಯೇ ರೋಮನರ ಆದರ್ಶವಾಗುತ್ತ ಬಂತು. ಪ್ರ.ಶ.ಪು.300-100ರ ವರೆಗೆ ಅವೆರಡರ ಮಿಶ್ರಶೈಲಿಗಳನ್ನೂ ಕಾಣಬಹುದು. ಆಗಸ್ಟನ್ ಕಾಲದಲ್ಲಿ ( ಪ್ರ.ಶ.ಪು.30-ಪ್ರ.ಶ.4) ಗ್ರೀಕರ ಆದರ್ಶ ಪಂಥದೊಂದಿಗೆ ರೋಮನರ ಸಹಜತೆಯನ್ನು ಮಿಳಿತ ಮಾಡುವ ಪ್ರಯತ್ನಗಳು ನಡೆದುವು. ಮುಂದಿನ ದಶಕಗಳಲ್ಲಿ ಎದೆಯವರೆಗಿನ ಮೂರ್ತಿಚಿತ್ರಣದಲ್ಲಿ ಒಂದೊಂದು ವ್ಯಕ್ತಿಯ ಮನಸ್ಸನ್ನೂ ಮುಖದಲ್ಲಿ ಮೂಡಿಸುವ ಪ್ರಯತ್ನ ನಡೆದಿರುವುದನ್ನು ಗುರುತಿಸಬಹುದು. ಟ್ರಾಜನ್ (2ನೆಯ ಶತಮಾನ) ರಾಜನ ಕಾಲದಲ್ಲಿ ಈಜಿಪ್ಟಿನ ಪ್ರಭಾವ ಹೆಚ್ಚಿದಂತೆ ತೋರುತ್ತದೆ. ಇದನ್ನು ರೋಮಿನ ಟ್ರಾಜನ್ ಶ್ರೇಣಿಯಲ್ಲಿ ಗುರುತಿಸಬಹುದು. ಹಾಡ್ರಿಯನ್ (3ನೆಯ ಶತಮಾನ) ರಾಜನ ಕಾಲದಲ್ಲಿ ಪುರ್ವ ರಾಷ್ಟ್ರಗಳ ಅನುಕರಣೆ ಹೆಚ್ಚಿ ಇದರಿಂದ ಕಲೆಯಲ್ಲಿ ಅಮೂರ್ತತೆ ಬೆಳೆಯಿತೆನ್ನಬಹುದು. ಪಾಂಪೇ ಪ್ರದೇಶದಲ್ಲಿ ಉಳಿದುಬಂದಿರುವ ವರ್ಣಚಿತ್ರಗಳು ರೋಮನ್ ಮಾದರಿಗೆ ಉತ್ತಮ ನಿದರ್ಶನಗಳಾಗಿವೆ. ರೋಮನರು ಮನೆಯ ಹೊರ ಅಂಗಣಕ್ಕಿಂತ ಒಳ ಅಂಗಣಗಳಲ್ಲೇ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿರುವುದು ಗಮನಾರ್ಹವಾದ ಒಂದು ಅಂಶ. ಚಿತ್ರಕಲೆಯಲ್ಲೂ ಲೋಹಕಲೆ, ಮೃತ್ಕಲೆ ಮತ್ತು ಗಾಜುಕಲೆಗಳಲ್ಲೂ ಹೆಚ್ಚಿನ ಅಲಂಕರಣ ಮತ್ತು ತೀಕ್ಷ್ಣ ವರ್ಣಗಳನ್ನು ನಾವು ಕಾಣಬಹುದು.
ಬೈಜಾ಼ಂಟಿಯನ್ ಶೈಲಿ
[ಬದಲಾಯಿಸಿ]ರೋಮನರ ಅನಂತರ ಪ್ರಾಬಲ್ಯಕ್ಕೆ ಬಂದದ್ದು ಬೈಜಾ಼ಂಟಿಯನ್ ಸಾಮ್ರಾಜ್ಯ. ಇದರ ತಿರುಳು ಪ್ರದೇಶಗಳೆಂದರೆ ಏಷ್ಯ ಮೈನರ್ ಮತ್ತು ಬಾಲ್ಕನ್ ಪ್ರಸ್ಥಭೂಮಿಯ ದಕ್ಷಿಣ ಪ್ರದೇಶ. ಸಾವಿರ ವರ್ಷಗಳ ಇದರ ಚರಿತ್ರೆಯಲ್ಲಿ ಅನೇಕ ಏಳುಬೀಳುಗಳನ್ನು ಕಾಣಬಹುದು. ಬೈಜಾ಼ಂಟಿಯನ್ (ಕಾನ್ಸ್ಟ್ಯಾಂಟಿನೋಪಲ್) ಅನ್ನು ರೋಮನ್ ಚಕ್ರಾಧಿಪತ್ಯದ ರಾಜಧಾನಿಯನ್ನಾಗಿ ಮಾಡಿದ (ಪ್ರ.ಶ. 330) ಅನಂತರ ಅಲ್ಲಿ ಬೆಳೆದು ಬಂದ ಶೈಲಿಯನ್ನು ಬೈಜಾ಼ಂಟಿಯನ್ ಶೈಲಿ ಎನ್ನುತ್ತಾರೆ. ರೋಮನ್ ರೀತಿಯಲ್ಲಿಯೇ ಕಟ್ಟಡಗಳನ್ನೂ ಕಟ್ಟಿ ಅವಕ್ಕೆ ಇನ್ನೂ ಹೆಚ್ಚಿನ ಬಣ್ಣಗಳನ್ನೂ ಅಲಂಕರಣಗಳನ್ನೂ ಉಪಯೋಗಿಸಿರುವುದು ಈ ಶೈಲಿಯ ವೈಶಿಷ್ಟ್ಯ. ಈ ಶೈಲಿ ಗ್ರೀಸ್, ಬಾಲ್ಕನ್ ಪ್ರದೇಶಗಳ ಮೂಲಕ ಏಷ್ಯ ಮೈನರನ್ನು ಹೊಕ್ಕು ರಷ್ಯದಲ್ಲಿ ಹರಡಿತು. ಇದರ ಖಚಿತ ಅಭಿವ್ಯಕ್ತಿಯನ್ನು ರಾವೆನ್ನದಲ್ಲಿನ ಸ್ಯಾನ್ವಿಟೇಲನ ಚರ್ಚಿನಲ್ಲೂ ಪ್ರಸಿದ್ಧ ಹಾಜಿಯ ಸೊಫಿಯದಲ್ಲೂ ಕಾಣಬಹುದು. ಅನಂತರ ಈ ಶೈಲಿಯ ಮೇಲೆ ಪೂರ್ವ ರಾಷ್ಟ್ರಗಳ ಪ್ರಭಾವ ಹೆಚ್ಚಿರುವುದನ್ನು ವೆನಿಸಿನ ಸೇಂಟ್ ಮಾರ್ಕನ ಚರ್ಚಿನಲ್ಲಿ ಗುರುತಿಸಬಹುದು. ಬರುಬರುತ್ತ ಈ ಶೈಲಿಯಲ್ಲಿನ ಅಲಂಕರಣ ವಿಧಾನಗಳು ಇನ್ನೂ ವಿಸ್ತಾರಗೊಂಡು ಹೆಚ್ಚು ಹೆಚ್ಚು ಸಂಕೀರ್ಣವಾಗತೊಡಗಿದುವು. ಇದಕ್ಕೆ ಉದಾಹರಣೆಯಾಗಿ ಮಾಸ್ಕೊ ಕೆಥೆಡ್ರಲ್ ಅನ್ನು ಹೆಸರಿಸಬಹುದು.
ಈ ಎಲ್ಲ ಗುಣಗಳನ್ನೂ ಬಿಜಾ಼ಂಟಿನ್ ಚಿತ್ರಕಲೆಯಲ್ಲೂ ಕಾಣಬಹುದು.ಈ ಕೆಳಗೆ ಕೆಲವು ಮಾದರಿಗಳನ್ನು ಕೊಡಲಾಗಿದೆ.
-
Slab with a relief representing the Nativity of Jesus; 4th-early 5th century; marble; Byzantine and Christian Museum (Athens)
-
Apse of the Santa Maria Maggiore church in Rome, decorated in the 5th century with this glamorous mosaic
-
Mosaics on a ceiling and some walls of the Basilica of San Vitale in Ravenna (Italy), circa 547 AD
-
The Little Metropolis in Athens, built on unknown dates, between the 9th century to the 13th century
-
Cameo; 10th-11th centuries; jasper, almandine, emerald and chrysoprase; from Constantinople; Moscow Kremlin Museums (Russia)
-
Gospel lectionary; circa 1100; tempera, gold, and ink on parchment, and leather binding; overall: 36.8 x 29.6 x 12.4 cm, folio: 35 x 26.2 cm; Metropolitan Museum of Art (New York City)
-
Icon of the New Testament Trinity; circa 1450; tempera and gold on wood panel (poplar); Cleveland Museum of Art (Cleveland, Ohio, US)
-
Page of an Armenian illuminated manuscript; 1637–1638; tempera colors, gold paint, and gold leaf on parchment; height: 25.2 cm; Getty Center (Los Angeles)
ಪ್ರಾಚೀನ ಕ್ರೈಸ್ತ ಶೈಲಿ
[ಬದಲಾಯಿಸಿ]ಕ್ರೈಸ್ತಧರ್ಮ ಹರಡಲು ಪ್ರಾರಂಭವಾದ ಮೊದಲ ದಿನಗಳಲ್ಲಿನ ಶಿಲ್ಪಶೈಲಿಯನ್ನು ಈ ಹೆಸರಿನಿಂದ ಕರೆಯಬಹುದು. ಎಲ್ಲಿಯವರೆಗೆ ರೋಮನ್ ಚಕ್ರಾಧಿಪತ್ಯದಲ್ಲಿ ಕ್ರೈಸ್ತಧರ್ಮಕ್ಕೆ ಬಹಿಷ್ಕಾರವಿತ್ತೋ ಅಲ್ಲಿಯವರೆಗೆ ಕ್ರೈಸ್ತರು ತಮ್ಮ ದೇವಾಲಯಗಳನ್ನು ನೆಲಮಾಳಿಗೆಯಲ್ಲಿ ಗುಪ್ತವಾಗಿ ನಿರ್ಮಿಸಿಕೊಳ್ಳುತ್ತಿದ್ದರು (ಕ್ಯಾಟಕೂಂಬ್ಸ್). ಪರಿಸ್ಥಿತಿ ಸುಧಾರಿಸಿ ರೋಮನ್ ದೊರೆ ಕಾನ್ಸ್ಟ್ಯಾಂಟೈನನೇ ಕ್ರೈಸ್ತಧರ್ಮಾವಲಂಬಿಯಾದಾಗ ಬಳಕೆಯಲ್ಲಿದ್ದ ಬ್ಯಾಸಿಲಿಕಗಳನ್ನೇ ತಮ್ಮ ಚರ್ಚುಗಳನ್ನಾಗಿ ಬಳಸಲಾರಂಭಿಸಿದರು. ಇಂಥ ಅನೇಕ ಚರ್ಚುಗಳು ಹೊರನೋಟಕ್ಕೆ ದೊಡ್ಡ ಉಗ್ರಾಣಗಳಂತೆ ಕಾಣುತ್ತಿದ್ದುವಾದರೂ ಒಳಗಿನ ಅಲಂಕರಣಗಳು ದಂಗುಬಡಿಸುವಂತಿದ್ದುವು. ರೋಮಿನ ಹೊರವಲಯದಲ್ಲಿರುವ ಸೇಂಟ್ ಪಾಲನ ಚರ್ಚು ಇಂಥ ಕಟ್ಟಡಗಳಿಗೆ ಒಂದು ಉತ್ತಮ ನಿದರ್ಶನ. ಇದು ನಿರ್ಮಾಣವಾದದ್ದು 380ರಲ್ಲಿ. ಅಲ್ಲಿಂದ ಮುಂದೆ ಸು.1400 ವರ್ಷಗಳ ಕಾಲ ಜನ ಇಲ್ಲಿ ಪ್ರಾರ್ಥನೆ ನಡೆಸಿದ್ದಾರೆ. 1823ರಲ್ಲಿ ಈ ಕಟ್ಟಡ ಬೆಂಕಿಯಿಂದ ನಾಶವಾಯಿತಾದರೂ ಮತ್ತೆ ಇದನ್ನು ಹಿಂದೆ ಇದ್ದಂತೆಯೇ ಕಟ್ಟಲಾಗಿದ್ದು ಇವತ್ತಿಗೂ ನಾವು ಇದನ್ನು ರೋಮಿನಲ್ಲಿ ನೋಡಬಹುದು.
ಅಂಧಕಾರ ಯುಗದಲ್ಲಿನ ಕ್ರೈಸ್ತಮತಗಳು
[ಬದಲಾಯಿಸಿ]ತನ್ನ ಕೊನೆಗಾಲದಲ್ಲಿ ರೋಮನ್ ಚಕ್ರಾಧಿಪತ್ಯ ಎರಡಾಗಿ ವಿಭಾಗಗೊಂಡಿತು. ಪುರ್ವಭಾಗಕ್ಕೆ ಕಾನ್ಸ್ಟ್ಯಾಂಟಿನೋಪಲ್ ಮತ್ತು ಪಶ್ಚಿಮ ಭಾಗಕ್ಕೆ ರೋಂ ರಾಜಧಾನಿಗಳಾದುವು. ಅದೇ ಅವರು ಫ್ರಾನ್ಸ್, ಇಟಲಿ, ಸ್ಪೇನುಗಳನ್ನು ಆಕ್ರಮಿಸಿ ಕೊನೆಗೊಮ್ಮೆ ರೋಮಿನಲ್ಲಿ ತಮ್ಮ ಝಂಡ ಊರಿದರು. ಓದುಬರೆಹ ಬಾರದ ಈ ಜನ ಒರಟರೂ ಯುದ್ಧಪ್ರಿಯರೂ ಆಗಿದ್ದರು. ಇಂಥವರು ಕ್ರಮೇಣ ಕ್ರೈಸ್ತಮತಾವಲಂಬಿಗಳಾಗಿದ್ದರು. ಇವರ ಆಳ್ವಿಕೆಯ ಕಾಲವನ್ನು ಚರಿತ್ರೆಯಲ್ಲಿ ಅಂಧಕಾರ ಯುಗವೆನ್ನಲಾಗಿದೆ (ಪ್ರ.ಶ. 500 - ಪ್ರ.ಶ. 1000). ಹೀಗೆನ್ನಲು ಅನೇಕ ಕಾರಣಗಳಿವೆ. ಮಧ್ಯಯುರೋಪಿನಲ್ಲಿ ಸುಸಂಘಟಿತವಾದ ಯಾವ ರಾಜಕೀಯ ವ್ಯವಸ್ಥೆಯೂ ಅಂದು ಇರಲಿಲ್ಲ. ಸ್ಪೇನ್, ಇಟಲಿ, ಫ್ರಾನ್ಸ್ ಇವಾವುವೂ ರಾಷ್ಟ್ರಮಟ್ಟವನ್ನು ಮುಟ್ಟಿರಲಿಲ್ಲ. ಸಣ್ಣಪುಟ್ಟ ಪ್ರಾಂತ್ಯಗಳು ತಮ್ಮ ತಮ್ಮಲ್ಲಿ ಸದಾ ಹೋರಾಡುತ್ತಿದ್ದುವು. ರೋಮನರ ಭಾಷೆಯಾದ ಲ್ಯಾಟಿನ್ ಮರೆಯಾಗುತ್ತ ಬಂದಿದ್ದು ಅದರಿಂದ ಹುಟ್ಟಿದ್ದ ಅನೇಕ ಉಪಭಾಷೆಗಳು ಬಳಕೆಗೆ ಬರುತ್ತಿದ್ದುವು. ಒಬ್ಬರಾಡಿದ ಭಾಷೆ ಇನ್ನೊಬ್ಬರಿಗೆ ಅರ್ಥವಾಗುವಂತಿರಲಿಲ್ಲ. ಎಲ್ಲ ಮಬ್ಬಾದಂತೆ, ಏನೋ ಕಾವಳ ಕವಿದಂತೆ ಆಗಿತ್ತು. ಇಂಥ ಸಂದಿಗ್ಧ ಸಮಯದಲ್ಲಿ ಟ್ಯೂಟನ್ ದೊರೆಯಾದ ಷಾರ್ಲಮಾನನ ಆಡಳಿತ ತನ್ನದೇ ಆದ ಬೆಳಕಿನಿಂದ ಝಗಝಗಿಸುವ ಅವಧಿಯೆನಿಸಿದೆ. ಆತ ಸ್ವತಃ ಅನಾಗರಿಕ ಮತ್ತು ಅನಕ್ಷರಸ್ಥನಾದರೂ ದೇಶದ ಹಿತಚಿಂತನೆಯ ದೃಷ್ಟಿಯಿಂದ ಅನೇಕ ಉತ್ತಮ ಕೆಲಸಗಳನ್ನು ಮಾಡಿದ. ಜೊತೆಗೆ ಅಂದಿನ ಕ್ರೈಸ್ತ ಪಾದ್ರಿಗಳು ಹಿಂದಿನ ರೋಮನ್ ಭಾಷಾಸಾಹಿತ್ಯಗಳನ್ನು ಉಳಿಸಿಕೊಂಡು ಬಂದರಲ್ಲದೆ ಅನೇಕ ಹೊಸ ಮಠಗಳನ್ನು ಕಟ್ಟಿಸಿದರು. ಶಿಲ್ಪಕಲೆಯ ದೃಷ್ಟಿಯಿಂದ ಇವು ಪ್ರಮುಖವೆನಿಸಿವೆ. ನಿದರ್ಶನಗಳಾಗಿ ವೆಟ್ಟಿಂಗ್ಟನ್ನಿನ ಮೇರಿಯ ಸ್ಟೆಲ ಮಠವನ್ನೂ ರೋಮಿನ ಹೊರವಲಯದಲ್ಲಿದ್ದ ಸೇಂಟ್ ಪಾಲ್ ಮಠವನ್ನೂ ಹೆಸರಿಸಬಹುದು.
ರೋಮನೆಸ್ಕ್ ಶೈಲಿ
[ಬದಲಾಯಿಸಿ]ಅಂಧಕಾರ ಯುಗ ಕಳೆದ ಮೇಲಿನ ಮೂರುನೂರು ವರ್ಷಗಳ ಐರೋಪ್ಯ ಶಿಲ್ಪ, ಕಲೆಗಳನ್ನು ರೋಮನೆಸ್ಕ್ ಶೈಲಿಯವೆನ್ನುತ್ತಾರೆ (1000-1300). ಒಂದು ಕಾಲದಲ್ಲಿ ರೋಮನ್ ಸಾಮ್ರಾಜ್ಯದ ಭಾಗಗಳಾಗಿದ್ದು ಅನಂತರ ಪ್ರತ್ಯೇಕಾಧಿಕಾರಕ್ಕೊಳಪಟ್ಟ ಇಟಲಿ, ಫ್ರಾನ್ಸ್, ಸ್ಪೇನ್ ಮೊದಲಾದ ಪ್ರಾಂತ್ಯಗಳಲ್ಲಿ ಕಂಡು ಬಂದುದರಿಂದ ಈ ಶಿಲ್ಪಕ್ಕೆ ರೋಮನೆಸ್ಕ್ ಎಂಬ ಹೆಸರು ಬಂತು. ಇವುಗಳಿಗೆಲ್ಲ ಮೂಲ ರೋಮನ್ ಶಿಲ್ಪವಾದರೂ ಈ ಒಂದೊಂದೂ ಪ್ರಾಂತ್ಯ ತನ್ನದೇ ಆದ ರೀತಿಯಲ್ಲಿ ಶಿಲ್ಪ, ಕಲೆಗಳನ್ನು ಬೆಳೆಸಿಕೊಂಡಿರುವುದನ್ನು ನಾವು ನೋಡಬಹುದು. ಇಟಲಿಯ ಪಿಸ ನಗರದ ಓಲು ಗೋಪುರದ ಪಕ್ಕದಲ್ಲಿರುವ ಕೆಥೆಡ್ರಲ್ ರೋಮನೆಸ್ಕ್ ಮಾದರಿಗೆ ಒಳ್ಳೆಯ ನಿದರ್ಶನ. ಅದು ರೋಮನ್ ಶಿಲುಬೆಯಂತಿರದೆ ಲ್ಯಾಟಿನ್ ಶಿಲುಬೆಯ ಆಕಾರದಲ್ಲಿದೆ. ಅಂದರೆ ಅದರ ಒಂದು ದಿಂಡು ಇನ್ನೊಂದಕ್ಕಿಂತ ಉದ್ದವಾಗಿದೆ. ಅಲ್ಲದೆ ಅದರ ಮುಖ ಪುರ್ವಕ್ಕೆ ತಿರುಗಿದಂತಿದೆ. ಕೆಥೆಡ್ರಲಿನ ಕಂಬಸಾಲುಗಳ ಮೇಲಿನ ಮತ್ತು ಕಿಟಕಿಗಳ ಮೇಲಿನ ಗುಂಡು ಕಮಾನುಗಳು ರೋಮನೆಸ್ಕ್ ಮಾದರಿಯ ಮುಖ್ಯ ಗುಣವನ್ನು ತೋರಿಸುತ್ತವೆ. ಕಂಬಸಾಲುಗಳಲ್ಲಿ ನೆಲದ ಮೇಲಿನ ಮೊದಲ ಸಾಲು ಇದ್ದಷ್ಟು ಎತ್ತರವಾಗಿ ಮಹಡಿಯ ಕಂಬ ಸಾಲುಗಳಿಲ್ಲ. ಹಾಗೆಯೆ ಅದರ ಮೇಲಿನ ಸಾಲಿನ ಎತ್ತರವೂ ಕಡಿಮೆಯಾಗಿದೆ. ಇಟಲಿಯ ಒಂದೊಂದು ಊರಿನಲ್ಲೂ ಒಂದೊಂದು ವಾಸ್ತುಶಿಲ್ಪಕೃತಿಯನ್ನು ಅದರದರ ವೈಶಿಷ್ಟ್ಯಕ್ಕಾಗಿ ನಾವು ಹೆಸರಿಸಬಹುದು. ಫ್ರಾನ್ಸಿನ ಅಂಗುಲೆಮ್ ಕೆಥೆಡ್ರಲ್ ಇನ್ನೊಂದು ಒಳ್ಳೆಯ ಉದಾಹರಣೆ. ಜರ್ಮನಿಯಲ್ಲೂ ಈ ಶೈಲಿಯ ಭವ್ಯ ಕಟ್ಟಡಗಳನೇಕವಿವೆ. ಇಂಗ್ಲೆಂಡಿನಲ್ಲಿ ನಾರ್ಮನರ ಕಾಲದಲ್ಲಾದ ಕಟ್ಟಡಗಳು ಗುಣರೂಪಗಳ ದೃಷ್ಟಿಯಿಂದ ರೋಮನೆಸ್ಕ್ ಶೈಲಿಯವಾದರೂ ಅವನ್ನು ನಾರ್ಮನ್ ಶೈಲಿಯವೆನ್ನುವುದು ವಾಡಿಕೆ.
ಈ ಶೈಲಿಯ ಕೆಲವು ಮಾದರಿಗಳನ್ನು ಈ ಕೆಳಗೆ ತೋರಿಸಲಾಗಿದೆ.
-
Maria Laach Abbey (near Andernach, Germany), one of the most iconic Romanesque churches
-
Miniature of Saint John the Evangelist; before 1147; illumination on parchment; 35.5 cm; Avesnes-sur-Helpe (France)
-
The stoning of Saint Stephen; 1160s; fresco; height: 1.3 m; Saint John Abbey (Val Müstair, Canton of Grisons, Switzerland)
ಮಧ್ಯಯುಗದ ಕೋಟೆ ಕೊತ್ತಳಗಳು
[ಬದಲಾಯಿಸಿ]ಪಾಳೆಯಗಾರಿಕೆ ರೂಢಿಯಲ್ಲಿದ್ದ ಮಧ್ಯಯುಗ ದಲ್ಲಿ ಯುರೋಪಿನಲ್ಲೆಲ್ಲ ಕೋಟೆ ಕೊತ್ತಳಗಳು ನಿರ್ಮಾಣಗೊಂಡುವು. ಸಾಮಾನ್ಯವಾಗಿ ಇವು ಬೆಟ್ಟದ ನೆತ್ತಿಯಲ್ಲಿರುತ್ತವೆ. ಶತ್ರುಗಳ ದಾಳಿಯಿಂದ ಹಾಳಾಗದಿರಲು ಶ್ರೀಮಂತಾಧಿಕಾರಿ ಗಳು ಕಟ್ಟಿಸಿಕೊಂಡ ಈ ಮನೆಗಳ ಸುತ್ತಲೂ ಬಲವಾದ ಕಲ್ಲಿನ ಕೋಟೆಯಿರುತ್ತದೆ. ಕೋಟೆಗೊಂದು ದಿಡ್ಡಿಬಾಗಿಲಿದ್ದು ಅದು ಬಹು ಭದ್ರವಾಗಿರುತ್ತದೆ. ಸುತ್ತಣ ಪ್ರಾಕಾರದ ತಳದಲ್ಲಿ ಒಂದು ಕಂದಕವಿದ್ದು ಶತ್ರು ಲಗ್ಗೆ ಹತ್ತುವಾಗ ಅದನ್ನು ನೀರಿನಿಂದ ತುಂಬಲಾಗುತ್ತಿತ್ತು. ಗೋಡೆಯ ಮೇಲಿನ ಬುರುಜಗಳಿಂದ ಸೈನಿಕರು ಶತ್ರುಗಳ ಮೇಲೆ ಅಸ್ತ್ರಪ್ರಯೋಗಮಾಡುವ ಅನುಕೂಲಗಳಿರುತ್ತವೆ. ಒಂದು ಕೋಟೆಮನೆ ಎಂದರೆ ಒಂದು ಚಿಕ್ಕ ಊರು ಇದ್ದಂತೆಯೆ. ಅದರಲ್ಲಿ ಅನುಕೂಲವಾದ ಅರಮನೆ, ವಿಹಾರಸ್ಥಳಗಳು, ಪುಜಾಗೃಹಗಳು, ಬಂದಿಖಾನೆ, ದಿವಾನಖಾನೆ, ಉಗ್ರಾಣ ಇತ್ಯಾದಿ ಸಕಲವೂ ಇರುತ್ತವೆ. ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಆಸ್ಟ್ರಿಯ, ರಷ್ಯ ಮೊದಲಾದ ಕಡೆ ನೀರನ್ನು, ಬೆಟ್ಟವನ್ನು ಆಶ್ರಯಿಸಿ ನಿಂತಿರುವ ಕೋಟೆಮನೆಗಳನ್ನು ಇಂದಿಗೂ ಕಾಣಬಹುದು.
ಗಾಥಿಕ್ ಶೈಲಿ
[ಬದಲಾಯಿಸಿ]ಮಧ್ಯಯುಗದ ಕೊನೆಯ ಭಾಗದಲ್ಲಿ ಹಾಗೂ ಪುನರುಜ್ಜೀವನ ಅವಧಿಯ ಪ್ರಾರಂಭದಲ್ಲಿ ಕಂಡುಬರುವ ವಿಶಿಷ್ಟ ವಾಸ್ತುಶಿಲ್ಪಶೈಲಿಗೆ ಈ ಹೆಸರಿದೆ. ಪ್ರ.ಶ. 12-15ನೆಯ ಶತಮಾನದವರೆಗೆ ಯುರೋಪಿನಲ್ಲೆಲ್ಲ ಇದು ಪ್ರಧಾನ ಶೈಲಿಯಾಗಿದ್ದುದು ಕಂಡುಬರುತ್ತದೆ. ಈ ಶೈಲಿಗೆ ಈ ಹೆಸರು ಬರಲು ಇರುವ ಕಾರಣ ಬಹು ವಿಚಿತ್ರವಾಗಿದೆ. ಜರ್ಮನಿಯ ಗಾಥ್ ಜನ ಪಶ್ಚಿಮಕ್ಕೂ ದಕ್ಷಿಣಕ್ಕೂ ನುಗ್ಗಿ ದಾಳಿ ಮಾಡಿ ರೋಮನ್ ಚಕ್ರಾಧಿಪತ್ಯವನ್ನು ಹಾಳು ಮಾಡಿದರಷ್ಟೆ. ಈ ಜನ ಒರಟರು, ಕ್ರೂರಿಗಳು, ವಿಧ್ವಂಸಕಾರಿ ಮನೋಧರ್ಮ ಉಳ್ಳವರು. ತಾವು ಹೋದ ಕಡೆಯೆಲ್ಲ ಕೊಲೆ ಸುಲಿಗೆಗಳನ್ನು ಮಾಡಿದರಲ್ಲದೆ ಕಣ್ಣಿಗೆ ಕಂಡ ಊರು ಕೇರಿಗಳಿಗೆ ಬೆಂಕಿಯಿಟ್ಟು ಸುಟ್ಟರು. ಗಾಥ್ ಜನರ ಆಳ್ವಿಕೆಯ ಕಾಲದಲ್ಲಿ ಬೆಳೆದು ಬಂದ ವಾಸ್ತುಶಿಲ್ಪಶೈಲಿಯನ್ನು ಆ ಜನರ ಹೆಸರಿಗೇ ಕಟ್ಟಿ ಅದನ್ನು ಗಾಥಿಕ್ ಎಂದು ಕರೆದರು ಸಹಜವೇ. ಗಾಥಿಕ್ ಶೈಲಿ ನಿಜಕ್ಕೂ ಬಹು ಸುಂದರವಾದ ಶೈಲಿಯಾದರೂ ಅದು ಪ್ರಾಚೀನ ಗ್ರೀಕ್ ಮತ್ತು ರೋಮನ್ ಶೈಲಿಯಷ್ಟು ಸುಸಂಸ್ಕೃತವೆಂದು ಅಂದಿನ ಜನ ತಿಳಿಯಲಿಲ್ಲ. ಅದರ ಬಗ್ಗೆ ಅವರಿಗೆ ಬಹು ತಾತ್ಸಾರವಿತ್ತು. ಒರಟು, ಅಸಂಸ್ಕೃತ, ಅನಾಗರಿಕ ಎಂಬ ಅರ್ಥದಲ್ಲಿ ಗಾಥಿಕ್ ಎಂಬ ಪದವನ್ನಿಲ್ಲಿ ಬಳಸಲಾಗಿದೆ. ಆದರೆ ಗಾಥಿಕ್ ಶೈಲಿ ನಿಜಕ್ಕೂ ವಿಚಿತ್ರವಾಗಿದ್ದು ಬಹು ಸುಂದರವಾಗಿದೆ. ಅಲ್ಲದೆ ಅದನ್ನು ಬಳಕೆಗೆ ತಂದವರು ಗಾಥರಲ್ಲ. ಗಾಥರ ಆಳ್ವಿಕೆಯ ಕಾಲದಲ್ಲಿ ಆಯಾ ಪ್ರಾಂತ್ಯದ ಸ್ಥಳೀಯ ಶಿಲ್ಪಿಗಳು ಸ್ವಸಂತೋಷದಿಂದ, ಧಾರ್ಮಿಕ ತೃಪ್ತಿಗಾಗಿ, ರೋಮನ್ ಮತ್ತು ರೋಮನೆಸ್ಕ್ ಶೈಲಿಗಳನ್ನು ಅನುಕರಿಸಿ, ಆದರೂ ಅದಕ್ಕಿಂತ ಭಿನ್ನವೆನಿಸಿದ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ನಿರ್ಮಿಸಿದ ವಾಸ್ತುಶಿಲ್ಪಶೈಲಿಯೇ ಗಾಥಿಕ್ ಶೈಲಿ.
ಈ ಶೈಲಿಯಲ್ಲಿ ನಿರ್ಮಿಸಲಾದ ಕೆಲವು ಮಾದರಿಗಳ ಛಾಯಾಚಿತ್ರಗಳು.
-
Part of the Royal Portal; 1145–1155; limestone; Chartres Cathedral (Chartres, France)
-
North transept windows; circa 1230–1235; stained glass; diameter (rose window): 10.2 m; Chartres Cathedral
-
Scenes from the Legend of Saint Vincent of Saragossa; 1245–1247; pot-metal glass, vitreous paint, and lead; overall: 373.4 x 110.5 cm; Metropolitan Museum of Art (New York City)
-
French diptych with the coronation of the Virgin and the Last Judgment; 1260–1270; elephant ivory with metal mounts; overall: 12.7 x 13 x 1.9 cm; Metropolitan Museum of Art
-
Enthroned Virgin and child; 1260–1280; elephant ivory with traces of paint and gilding; overall: 18.4 x 7.6 x 7.3 cm; Metropolitan Museum of Art
-
Flamboyant Gothic cross-windows of the Hôtel de Sens (Paris)
ಲಕ್ಷಣಗಳು
[ಬದಲಾಯಿಸಿ]ಇದರ ಪ್ರಧಾನ ಲಕ್ಷಣಗಳು ಇವು: ಅದುವರೆಗೂ ಅಡ್ಡಗಲ್ಲಾಗಿ ನೆಲದಲ್ಲಿ ವಿಸ್ತಾರವಾಗಿ ಹರಡಿ ನಿಂತಿರುತ್ತಿದ್ದ ಮನೆಗಳು ನೆಟ್ಟಗೆ ಆಕಾಶದ ಕಡೆಗೆ ಎತ್ತರ ಎತ್ತರವಾಗಿ ಬೆಳೆಯತೊಡಗಿದುವು. ಅಂದರೆ ಹಲವು ಉಪ್ಪರಿಗೆಯ ಮನೆಗಳು ಬಳಕೆಗೆ ಬಂದುವು. ಚಾವಣಿಗಳಿಗೆ ಮರವನ್ನು ಉಪಯೋಗಿಸುವುದನ್ನು ನಿಲ್ಲಿಸಿ ಕಲ್ಲನ್ನೇ ಬಳಸಲು ಪ್ರಾರಂಭಿಸಿದರು. ಕಿಟಕಿ, ಬಾಗಿಲು ಹಾಗೂ ಕಂಬಸಾಲುಗಳ ಮೇಲಿದ್ದ ಕಮಾನುಗಳನ್ನು ಅರ್ಧವೃತ್ತಾಕಾರದಲ್ಲಿ ಮಾಡದೆ ಚೂಪಾಗಿ ನಿರ್ವಹಿಸಲಾಯಿತು. ಇದು ಅಂಥ ಹೊಸ ತಂತ್ರವೇನಲ್ಲ. ಪುರ್ವರಾಷ್ಟ್ರಗಳಲ್ಲಿ ಚೂಪು ಕಮಾನಿನ ಬಳಕೆ ಬಹಳ ಹಿಂದಿನಿಂದಲೂ ಇತ್ತು. ಧರ್ಮಯುದ್ಧಗಳಿಗಾಗಿ ವಿದೇಶಗಳಿಗೆ ಹೋದ ಯೋಧರು ಅದನ್ನು ಯುರೋಪಿಗೆ ತಂದರು. ಶಿಲ್ಪತಂತ್ರದ ದೃಷ್ಟಿಯಿಂದಲೂ ಗುಂಡು ಕಮಾನಿಗಿಂತ ಚೂಪು ಕಮಾನುಗಳ ನಿರ್ವಹಣೆ ಸುಲಭವೆನ್ನಲಾಗಿದೆ.ಚೂಪು ಕಮಾನುಗಳು, ಎತ್ತರೆತ್ತರದ ಮಹಡಿಗಳು, ತುದಿಯ ಗೋಪುರಗಳು, ಹೆಚ್ಚಿನ ಚಿತ್ರಕೆಲಸಗಳು, ಬಣ್ಣದ ಗಾಜು-ಇವು ಗಾಥಿಕ್ ಶೈಲಿಯ ಮುಖ್ಯಾಂಶಗಳು. ಫ್ರಾನ್ಸಿನಲ್ಲಿ ಈ ಶೈಲಿಯ ಅನೇಕ ಚರ್ಚುಗಳಿವೆ. ಅವುಗಳಲ್ಲೆಲ್ಲ ಬಹು ಪ್ರಸಿದ್ಧವಾದುದು ಆಮಿಯೆನ್ಸ್ ಕೆಥೆಡ್ರಲ್. ಜೊತೆಗೆ ನೋಟರ್ಡೇಮ್, ಸೇಂಟ್ ಚಾಪೆಲ್, ರ್ಹೀಮ್ಸ್‌ಗಳನ್ನು ಹೆಸರಿಸಬಹುದು. ಇಂಗ್ಲೆಂಡಿನಲ್ಲಿ ಗಾಥಿಕ್ ಶೈಲಿಗೆ ಒಳ್ಳೆಯ ಉದಾಹರಣೆಗಳೆಂದರೆ ಸ್ಯಾಲಿಸ್ಬರಿ, ಲಿಂಕನ್ ಮತ್ತು ಕ್ಯಾಂಟರ್ಬರಿಗಳಲ್ಲಿರುವ ಕೆಥೆಡ್ರಿಲ್ಗಳು. ಸ್ಪೇನಿನ ವಾಸ್ತುಶಿಲ್ಪದಲ್ಲಿ ಅಲಂಕರಣ ಹೆಚ್ಚು ಮತ್ತು ಕಿಟಕಿಗಳು ಬಲು ಚಿಕ್ಕವು. ಜರ್ಮನಿಯ ಕೊಲೋನ್ ಕೆಥೆಡ್ರಲ್, ಬೆಲ್ಜಿಯಮಿನ ಆಂಟ್ವರ್ಪ್ನಲ್ಲಿರುವ ನಗರ ಸಭಾಭವನ, ಸ್ಪೇನಿನ ಬರ್ಗೋಸ್ ಕೆಥೆಡ್ರಲ್-ಈ ಕೆಲವು ಗಾಥಿಕ್ ಶೈಲಿಯ ಇತರ ಪ್ರಸಿದ್ಧ ನಿದರ್ಶನಗಳು.
ಮಹಮ್ಮದೀಯ ಶೈಲಿ
[ಬದಲಾಯಿಸಿ]ಇಸ್ಲಾಂ ಧರ್ಮ ಅರೇಬಿಯದಿಂದ ಬಹು ವೇಗವಾಗಿ ಪ್ರಪಂಚದ ಎಲ್ಲೆಡೆಗೂ ಹರಡಿತಷ್ಟೆ. ಅದರೊಂದಿಗೆ ಮುಸ್ಲಿಂ ರಾಷ್ಟ್ರವೂ ವ್ಯಾಪಕವಾಗಿ ಬೆಳೆಯುತ್ತ ಹೋಯಿತು. ಮುಸ್ಲಿಮರು ಮೆಡಿಟರೇನಿಯನ್ ಸಮುದ್ರದ ದಕ್ಷಿಣದಲ್ಲಿ ಈಜಿಪ್ಟ್, ಆಫ್ರಿಕದ ಉತ್ತರ ತೀರಗಳನ್ನು ಆಕ್ರಮಿಸಿ ಕ್ರಮೇಣ ಜಿಬ್ರಾಲ್ಟರ್ ಮುಖಾಂತರ ಸ್ಪೇನನ್ನು ತಲಪಿದರು. ಕಾಲ ಸಂದಂತೆ ಸ್ಪೇನನ್ನೆಲ್ಲ ಆಕ್ರಮಿಸಿ ಫ್ರಾನ್ಸಿನತ್ತ ನಡೆದರು. ಆದರೆ ಫ್ರೆಂಚರು ಟೂರ್ಸ್ ಯುದ್ಧದಲ್ಲಿ ಸೆಣಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಮಹಮ್ಮದೀಯರ ಆಡಳಿತಕ್ಕೆ ಕೆಲಕಾಲ ಒಳಪಟ್ಟಿದ್ದ ಸ್ಪೇನಿನಲ್ಲಿ ಆ ಶೈಲಿಯ ಅನೇಕ ಕಟ್ಟಡಗಳು ನಿರ್ಮಾಣವಾದುವು. ಸ್ಪೇನಿನಲ್ಲಿ ನೆಲೆಸಿದ್ದ ಅರಬ್ಬೀಯರನ್ನು ಮೂರರೆನ್ನುತ್ತಾರೆ. ಇವರ ರಾಜಧಾನಿ ಕಾರ್ಡೋವ. ಮೂರರು ಸ್ಪೇನಿನಲ್ಲಿ ಸುಮಾರು ಏಳುನೂರು ವರ್ಷ ಆಡಳಿತ ನಡೆಸಿ ಕ್ರಿಸ್ಟೊಫರ್ ಕೊಲಂಬಸನ ಕಾಲಕ್ಕೆ ಅಲ್ಲಿಂದ ಕಾಲು ತೆಗೆದರು. ಸ್ಪೇನಿನ ಗ್ರನಾಡದಲ್ಲಿದ್ದ ಅರಸುಮನೆತನದವರು ನಿರ್ಮಿಸಿದ ಆಲ್ಹಂಬ್ರ ಕೋಟೆ, ಅರಮನೆ ಮಹಮ್ಮದೀಯ ಶೈಲಿಗೊಂದು ಒಳ್ಳೆಯ ಉದಾಹರಣೆ. ಕಾರ್ಡೋವದಲ್ಲಿನ ಮಸೀದಿ. ಸೆವಿಲ್ನಲ್ಲಿರುವ ಗಿರಾಲ್ಡ ಗೋಪುರಗಳು ಪ್ರಸಿದ್ಧವಿವೆ.
ಪುನರುಜ್ಜೀವನ (ರೆನೆಸಾನ್ಸ್) ಕಾಲದ ಶಿಲ್ಪ
[ಬದಲಾಯಿಸಿ]ಮಧ್ಯಯುಗದಿಂದ ಆಧುನಿಕ ಯುಗದ ನಡುವಣ ಅವಧಿಯನ್ನು ಪುನರುಜ್ಜೀವನ ಕಾಲವೆನ್ನುತ್ತೇವೆ. ಅದು ಪ್ರ.ಶ.ಸು. 14-16ನೆಯ ಶತಮಾನದವರೆಗಿನ ಕಾಲವನ್ನು ಸೂಚಿಸುತ್ತದೆ. ಇಟಲಿಯಲ್ಲಿ ಪ್ರಾರಂಭವಾದ ಈ ಹೊಸ ಧೋರಣೆ 15 ಮತ್ತು 16 ನೆಯ ಶತಮಾನಗಳಲ್ಲಿ ಪುರ್ಣವಿಕಾಸಗೊಂಡು ಫ್ರಾನ್ಸ್, ಸ್ಪೇನ್, ಜರ್ಮನಿ, ಇಂಗ್ಲೆಂಡ್ ಮತ್ತು ಇತರ ಐರೋಪ್ಯ ದೇಶಗಳಿಗೆ ಹರಡಿತು. ಇದರಿಂದಾಗಿ ಗಾಥಿಕ್ ಶೈಲಿ ಹಿಂದೆ ಸರಿಯಿತು. ಕಟ್ಟಡದ ಒಟ್ಟು ರಚನೆಗಿಂತ ಅದರ ಮುಖಭಾಗ ಮತ್ತು ಒಳಭಾಗಗಳ ಕುಸುರಿಚಿತ್ರಣಕ್ಕೆ ಪ್ರಾಶಸ್ತ್ಯಬಂತು. ಈ ಶೈಲಿಯ ಪ್ರಾರಂಭಿಕ ಕಾಲದ (1420-1500) ಮುಖ್ಯಶಿಲ್ಪಿಗಳೆಂದರೆ ಬ್ರೂನೆಲೆಶ್ಚಿ, ಆಲ್ಬರ್ಟಿ, ಬ್ರಮಾಂಟೆ. ಫ್ಲಾರೆನ್ಸ್,ಮಿಲಾನ್,ವೆನಿಸ್ಗಳಲ್ಲಿ ಇವರ ಕೃತಿಗಳನ್ನು ಕಾಣಬಹುದು. ಮಧ್ಯಕಾಲದಲ್ಲಿ (1500-1780) ರೋಮ್ ನಗರದಲ್ಲಿ ಮತ್ತು ಅದರ ಸುತ್ತಮುತ್ತ ಬ್ರಮಾಂಟೆ ಮತ್ತು ಇತರರು ಕೆಲಸ ಮಾಡಿದರು. ಅವರ ಶಿಷ್ಟ ಶೈಲಿಗೆ ಸೇಂಟ್ ಪೀಟರನ ಚರ್ಚು ಉತ್ತಮ ನಿದರ್ಶನವಾಗಿದೆ. ಪುನರುಜ್ಜೀವನಕಾಲದ ಕೊನೆಯ ಭಾಗದಲ್ಲಿ (1500-1780) ಬ್ಯಾರೋಕ್ ಮತ್ತು ರೊಕೊಕೊ ಶೈಲಿ ಪ್ರಧಾನವಾಯಿತು.ಈ ಕಾಲದ ಚಿತ್ರ ಕಲಾಪ್ರೌಢಿಮೆಗೆ ಇಟಲಿಯ ಫ್ಲಾರೆನ್ಸ್ ಕೇಂದ್ರವೆನಿಸಿತು. ಅಲ್ಲಿನ ಪ್ರಸಿದ್ಧ ಚಿತ್ರಕಾರರಲ್ಲಿ ಜಾ಼ಟ್ಟೊ, ಫ್ರಾ ಅಂಜೆಲಿಕೊ, ಲಿಯೊನಾರ್ಡೊ ಡ ವಿಂಚಿ, ಬಾಟಿಸಿಲಿ,ಮೈಕೆಲೇಂಜಲೊ ಇವರನ್ನು ಹೆಸರಿಸಬಹುದು. ಸಿಯೆನ್ನಾ ವೆನಿಸ್, ರೋಮ್ ಮತ್ತು ಇತರ ಇಟಲಿಯ ಪ್ರಮುಖ ಪಟ್ಟಣಗಳಲ್ಲಿ ಕಲಾವಿದರು ತಮ್ಮವೇ ಆದ ಪ್ರಸ್ಥಾನಗಳನ್ನು ಬೆಳಕಿಗೆ ತಂದರು. ಇದೇ ಕಾಲದಲ್ಲಿ ಪ್ರಸಿದ್ಧ ಕಲಾವಿದ ರ್ಯಾಫೆಲ್ ರೋಮಿನಲ್ಲಿ ತನ್ನ ಕೃತಿರಚನೆ ಮಾಡಿದ. ಎಂಟನೆಯ ಚಾರಲ್ಸ್ ನೇಪಲ್ಸಿನ ಮೇಲೆ ಮಾಡಿದ ದಾಳಿಯಿಂದಾಗಿ ಪುನರುಜ್ಜೀವನಕಾಲದ ಧೋರಣೆಗಳು ಫ್ರಾನ್ಸಿಸ್ ಪ್ರವೇಶಿಸಿದುವು. ಇಟಲಿಯ ಕಲಾವಿದರನ್ನು ಒಂದನೆಯ ಫ್ರಾನ್ಸಿಸ್ ಆಹ್ವಾನಿಸಿದ. ಎರಡನೆಯ ಹೆನ್ರಿ ಇಟಲಿಯ ಕ್ಯಾಥರೀನ್ ಡಿ ಮೆಡಿಚಿಯನ್ನು ಮದುವೆಯಾದ ಮೇಲಂತೂ ಇಟಲಿಗೆ ಕೋಡು ಕೊನರಿತು. ಸು. 15ನೆಯ ಶತಮಾನದಲ್ಲಿ ಇದರ ಪ್ರಭಾವ ಸ್ಪೇನಿನ ಮೇಲೂ ಆದಂತೆ ಧೋರಣೆಗಳು ಇಂಗ್ಲೆಂಡ್ ಮತ್ತು ಜರ್ಮನಿಗಳ ಮೇಲೆ ಅಷ್ಟು ಪ್ರಭಾವ ಬೀರದಿರುವ ವಿಷಯ ಗಮನಾರ್ಹವಾದುದು.
-
Crucifix; Giotto; circa 1300; tempera on panel; 5.78 x 4.06 m; Santa Maria Novella (Florence, Italy)[೬]
-
The Maestà Altarpiece; by Duccio; 1308–1311; tempera on panel; 2.46 x 4.67 m; Museo dell'Opera del Duomo (Siena, Italy)
ಬ್ಯಾರೋಕ್ ಶೈಲಿ
[ಬದಲಾಯಿಸಿ]ಇಟಲಿಯಲ್ಲಿ 16ನೆಯ ಶತಮಾನದಿಂದಾಚೆ ಬಳಕೆಗೆ ಬಂದ ಶಿಲ್ಪಶೈಲಿ. ಅಭಿಜಾತಶೈಲಿಗೆ ಪ್ರತಿಯಾಗಿ ಹುಟ್ಟಿದುದು. ಅತ್ಯಾಲಂಕಾರವೇ ಇದರ ದಾರಿ. ಅನಂತರ ಸುಮಾರು ಒಂದೂವರೆ ಶತಮಾನ ಇದು ಇಡೀ ಯುರೋಪಿನಲ್ಲೆಲ್ಲ ಖ್ಯಾತ ಪದ್ಧತಿಯಾಗಿತ್ತು. ಅನಂತರ ಮತ್ತೆ 18ನೆಯ ಶತಮಾನದಲ್ಲಿ ಅಭಿರುಚಿ ಅಭಿಜಾತಪದ್ಧತಿಯ ಕಡೆಗೇ ಹೊರಳಿತು. ರೋಮಿನ ಸೇಂಟ್ ಪೀಟರ್ ಚರ್ಚಿನ ಚೌಕದಲ್ಲಿ ಬರ್ನಿನಿ ಈ ಶೈಲಿಯಲ್ಲಿ ಕೆಲಸ ಮಾಡಿದ್ದಾನೆ. ಈ ಪದ್ಧತಿಯಲ್ಲಿ ಉಳಿದ ಪ್ರಸಿದ್ಧರೆಂದರೆ ಬಾರೊಮಿನಿ, ವಿಗ್ನೋಲ. ಫ್ರಾನ್ಸಿನಲ್ಲಿ ಹದಿನಾಲ್ಕನೆಯ ಲೂಯಿಯ ಆಡಳಿತದಲ್ಲಿ ಈ ಶೈಲಿ ಉಚ್ಛ್ರಾಯ ಸ್ಥಿತಿಗೇರಿತು. ಜರ್ಮನಿ, ಆಸ್ಟ್ರಿಯ, ಸ್ಪೇನುಗಳಲ್ಲಿ ಈ ಶೈಲಿಯ ಅತಿರೇಕಗಳನ್ನು ಕಾಣಬಹುದು.
ಬ್ಯಾರೋಕ್ ಶೈಲಿಯ ಕೆಲವು ಉದಾಹರಣೆಗಳು ಇಂತಿವೆ.
-
The Four Continents; by Peter Paul Rubens; circa 1615; oil on canvas; 209 x 284 cm; Kunsthistorisches Museum (Vienna, Austria)
-
Dutch wardrobe; 1625–1650; oak with ebony and rosewood veneers; overall: 244.5 x 224.3 x 85.2 cm; Cleveland Museum of Art (Cleveland, Ohio, US)
-
The Night Watch; by Rembrandt; 1642; oil on canvas; 363 × 437 cm; Rijksmuseum (Amsterdam, the Netherlands)
-
The Ecstasy of Saint Teresa; by Gian Lorenzo Bernini; 1647–1652; marble; height: 3.5 m; Santa Maria della Vittoria (Rome)
-
Las Meninas; by Diego Velázquez; 1656–1657; oil on canvas; 318 cm × 276 cm; Museo del Prado (Madrid, Spain)
-
The Bust of Louis XIV; by Gian Lorenzo Bernini; 1665; marble; 105 × 99 × 46 cm; Palace of Versailles
-
The Art of Painting; by Johannes Vermeer; 1666–1668; oil on canvas; 1.3 x 1.1 m; Kunsthistorisches Museum
-
Carpet with fame and fortitude; 1668–1685; knotted and cut wool pile, woven with about 90 knots per square inch; 909.3 x 459.7 cm; Metropolitan Museum of Art
-
Dome of the Church of the Gesù (Rome), made in 1674 by Giovanni Battista Gaulli
-
The Karlskirche in Vienna (Austria), built between 1716 and 1737
ರೊಕೊಕೊ ಶೈಲಿ
[ಬದಲಾಯಿಸಿ]ಬ್ಯಾರೋಕ್ ಶೈಲಿಯಿಂದ ಹೊಮ್ಮಿಬಂದ ಒಂದು ನವುರಾದ ಹೊಸ ಶೈಲಿ. ಫ್ರಾನ್ಸಿನಲ್ಲಿ 15ನೆಯ ಲೂಯಿಯ ಕಾಲದಲ್ಲಿ (18ನೆಯ ಶತಮಾನ) ಬಳಕೆಗೆ ಬಂತು. ಒಳಾಂಗಣಗಳ ಕುಸುರಿ ಚಿತ್ರಣವೇ ಈ ಶೈಲಿಯ ವಿಶಿಷ್ಟ ಗುಣವೆನ್ನಬಹುದು. ಅಲಂಕರಣಕ್ಕಾಗಿ ಕಪ್ಪೆಚಿಪ್ಪು, ಶಂಖ, ಹೂ ಮೊದಲಾದವನ್ನು ಬಳಸಲಾಗಿದೆ. ಈ ಶೈಲಿಯಲ್ಲಿ ಸ್ವಲ್ಪಮಟ್ಟಿಗೆ ಚೀನೀಮಾದರಿಗಳ ಅನುಕರಣೆ ಇದೆ. ರೊಕೊಕೊ ಶೈಲಿಯ ಪ್ರಭಾವ ಜರ್ಮನಿ, ಆಸ್ಟ್ರಿಯ ಮತ್ತು ಇಂಗ್ಲೆಂಡಿನ ಮೇಲೆ ಸಾಕಷ್ಟು ಆಯಿತೆನ್ನಲು ದಾಖಲೆಗಳಿವೆ.
-
The amazing interior of the Wilhering Abbey (Wilhering, Austria). This interior has a trompe-l'œil on its ceiling, surrounded of highly decorated stuccos
-
Boiserie from the Hôtel de Varengeville; circa 1736–1752; various materials, including carved, painted, and gilded oak; height: 5.58 m, width: 7.07 m, length: 12.36 m; in the Metropolitan Museum of Art (New York City)
-
Title print; by Juste Meissonnier; 1738–1749; etching on paper; 51.6 x 34.9 cm; Rijksmuseum
-
Pair of candelabrums; 18th century; soft-paste porcelain; heights (the left one): 26.8 cm, (the right one): 26.4 cm; by the Chelsea porcelain factory; Metropolitan Museum of Art
-
Mr and Mrs Andrews; by Thomas Gainsborough; circa 1750; oil on canvas; 69.8 x 119.4 cm; National Gallery (London)
-
Madame de Pompadour; by François Boucher; 1756; oil on canvas; 2.01 x 1.57 m; Alte Pinakothek (Munich, Germany)
-
The Swing; by Jean-Honoré Fragonard; 1767–1768; oil on canvas; height: 81 cm, width: 64 cm; Wallace Collection (London)
ಜಾರ್ಜಿಯನ್ ಮತ್ತು ರೀಜೆನ್ಸಿ ಶೈಲಿಗಳು
[ಬದಲಾಯಿಸಿ]ಯುರೋಪಿನ ಪುನರುಜ್ಜೀವನ ಕಾಲದ ಶಿಲ್ಪಶೈಲಿಯನ್ನು ಇಂಗ್ಲೆಂಡಿನಲ್ಲಿ ಈ ಹೆಸರಿನಿಂದ ಕರೆಯಲಾಯಿತು. ರಾಣಿ ಆನಳ ರಾಜ್ಯಭಾರ ಮುಗಿದು ಒಂದನೆಯ ಜಾರ್ಜ್ ಪಟ್ಟಕ್ಕೆ ಬಂದ ಸುಮಾರಿನಲ್ಲಿ (1720) ಪ್ರಾರಂಭವಾದ ಈ ಶೈಲಿ 19ನೆಯ ಶತಮಾನದ ಮೊದಲ ದಶಕ ಮುಗಿಯುವವರೆಗೂ ಉಳಿದು ಬಂದಿತೆನ್ನಬಹುದು. ಅನಂತರ ಎಂದರೆ ನಾಲ್ಕನೆಯ ಜಾರ್ಜ್ ಪ್ರಿನ್ಸ್ ರೀಜೆಂಟ್ ಆದ ಸುಮಾರಿನಲ್ಲಿ (1811) ಇದು ರೀಜೆನ್ಸಿ ಶೈಲಿಯಲ್ಲಿ ಲೀನವಾಯಿತೆನ್ನಬಹುದು.
ಕೈಗಾರಿಕೆಗಳು
[ಬದಲಾಯಿಸಿ]ಅದು ಎಲ್ಲ ಕಡೆಯೂ ಕೈಗಾರಿಕೆಗಳು ಬೆಳೆಯುತ್ತಿದ್ದ ಕಾಲ. ಜನರೆಲ್ಲ ಬಹು ಸಂಖ್ಯೆಯಲ್ಲಿ ನಗರಗಳಲ್ಲಿ ಬಂದು ನೆಲೆಸಲು ಪ್ರಾರಂಭಿಸಿದ್ದರು. ರೋಮನರ ಕಾಲಕ್ಕೆ ನಿಂತುಹೋಗಿದ್ದ ನಗರನಿರ್ಮಾಣಕಲೆಗೆ ಈಗ ಮತ್ತೆ ಅವಕಾಶ ದೊರಕಿದಂತಾಯಿತು. ಬಾತ್ ಮತ್ತು ಎಡಿನ್ಬರೊ ನಗರಗಳಲ್ಲಿ ಜಾರ್ಜಿಯನ್ ಶೈಲಿಗೆ ಉತ್ತಮ ನಿದರ್ಶನಗಳು ದೊರೆಯುತ್ತವೆ. ಅವೆರಡೂ ಕಡೆ ನಗರರಚನೆಯ ಕೆಲಸ ಮಾಡಿದವ ರಾಬರ್ಟ್ ಆಡಮ್, ಇಲ್ಲಿ ಮನೆಗಳು ಅಂದವಾಗಿ ಅನುಕೂಲವಾಗಿ ಕಟ್ಟಲ್ಪಟ್ಟಿವೆ. ರಸ್ತೆಗಳ ಯೋಜನೆಯೂ ಸಮರ್ಪಕವಾಗಿದೆ. ಮನೆಗಳ ಬಾಹ್ಯಾಲಂಕರಣ ಅಭಿಜಾತಮಾದರಿಯಾಗಿದ್ದು ಬಾಗಿಲು ಕಿಟಕಿಗಳು ಗ್ರೀಕ್ ಮತ್ತು ರೋಮನ್ ಶೈಲಿಗಳಲ್ಲಿವೆ. ಈಗಲೇ ಬಹುಮಾಳಿಗೆಯ ವಾಸಗೃಹಗಳ ಬಳಕೆ ಹೆಚ್ಚಿದ್ದು. ಜಾಗ ಉಳಿಸುವುದು ಒಂದು ಉದ್ದೇಶವಾದರೆ ಅನುಕೂಲ ಎರಡನೆಯದು. ಅಕ್ಕಪಕ್ಕಗಳಲ್ಲಿ ಜಾಗ ಬಿಡದೆ ಸಾಲಾಗಿ ಮನೆಗಳನ್ನು ಕಟ್ಟಿ ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಸಾರ್ವಜನಿಕ ಉದ್ಯಾನಗಳನ್ನು ನಿರ್ಮಿಸಲಾಯಿತು. ದಾರಿ ಪಕ್ಕದ ಸಾಲು ಮರಗಳೂ ಹಸಿರು ಮೈದಾನಗಳೂ ಊರಿನ ಸೌಂದರ್ಯವನ್ನು ಹೆಚ್ಚಿಸಿದುವು. ಆಡಮ್ ಸಹೋದರರು ಮಧ್ಯ ಲಂಡನ್ನಿನ ಬಹುಭಾಗದ ವಾಸ್ತುಶಿಲ್ಪಕ್ಕೆ ದಾರಿತೋರಿದರು.ರೀಜೆನ್ಸಿ ಕಾಲದಲ್ಲಿ ಅಂದರೆ ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಅದುವರೆಗೂ ಶ್ರೀಮಂತರ ಮನೆಗಳಿಗೆ ದೊರೆಯಲಾಗಿದ್ದ ಪ್ರಾಶಸ್ತ್ಯ ಸಾಮಾನ್ಯರ ಮನೆಗಳಿಗೂ ಬಂತು. ಇದರಿಂದಾಗಿ ಬಾತ್, ಬ್ರೈಟನ್ ಮೊದಲಾದ ಅನೇಕ ಸುಂದರ ನಗರಗಳು ನಿರ್ಮಾಣವಾದುವು. ಲಂಡನ್ನಿನಲ್ಲಿ ಶಿಲ್ಪಿ ಜಾನ್ ನ್ಯಾಷ್ ಎಂಬಾತ ರೀಜೆಂಟ್ ರಸ್ತೆಗಳಲ್ಲಿ ಅದ್ಭುತವಾದ ಗೃಹಗಳನ್ನು ನಿರ್ಮಿಸಿದ. ಜನ ಈತನ ಕೃತಿಗಳನ್ನು ಅಭಿಜಾತ ಗ್ರೀಕ್ ಕಟ್ಟಡಗಳಂತಿವೆಯೆಂದು ಹೊಗಳಿದರು. ಅಷ್ಟರಲ್ಲಿ ಕೈಗಾರಿಕಾ ಕ್ರಾಂತಿ ತನ್ನ ಕೈವಾಡವನ್ನು ಪ್ರದರ್ಶಿಸಲಾರಂಭಿಸಿತು. ಕಾರ್ಖಾನೆಗಳ ಸುತ್ತಮುತ್ತ ಕಾರ್ಮಿಕರ ವಸತಿಗಳ ನಿರ್ಮಾಣ ಪ್ರಾರಂಭವಾಯಿತು. ಹಳೆಯ ನಗರ ನಿರ್ಮಾಣಕಾರ್ಯ ಸ್ಥಗಿತಗೊಂಡಿತು. ಇರುವಷ್ಟು ಜಾಗದಲ್ಲೇ ಹೆಚ್ಚು ಹೆಚ್ಚು ಜನರಿಗೆ ವಸತಿಯನ್ನೊದಗಿಸುವುದರ ಕಡೆ ಗಮನಹರಿಯಿತು. ಊರುಗಳಲ್ಲಿನ ಜನಸಂಖ್ಯೆ ಇದ್ದಕ್ಕಿದ್ದಂತೆ ಅಪಾರವಾಗಿ ಬೆಳೆಯತೊಡಗಿತು.
19ನೆಯ ಶತಮಾನ
[ಬದಲಾಯಿಸಿ]ಯುರೋಪಿನ ಅದರಲ್ಲೂ ಇಂಗ್ಲೆಂಡಿನ ವಾಸ್ತುಶಿಲ್ಪ ಈ ಶತಮಾನದಲ್ಲಿ ಬಹು ಸಂಕೀರ್ಣವಾಯಿತೆನ್ನಬಹುದು. ಒಂದು ಕಡೆ ಅಭಿಜಾತ ಶೈಲಿಗೂ ಮತ್ತೊಂದು ಕಡೆ ಗಾಥಿಕ್ ಶೈಲಿಗೂ ಪೈಪೋಟಿ ನಡೆದುದನ್ನು ಶತಮಾನದ ಉದ್ದಕ್ಕೂ ನಾವು ನೋಡಬಹುದು. ಪಲ್ಲಾಡಿಯನಿಸಂ ಶೈಲಿಯ ಚೇಂಬರ್ಸ್ ಮತ್ತು ಪಾಂಪೇಯ ಶೈಲಿಯ ಆಡಮ್-ಈ ಇಬ್ಬರು ಶಿಲ್ಪಿಗಳೂ ಇಟಲಿಯಿಂದ ತಮ್ಮ ಸ್ಫೂರ್ತಿಯನ್ನು ಪಡೆದರು. ರೀಜೆಂಟ್ ಪಾರ್ಕಿನ ಬೃಹದ್ಗೃಹಗಳು, ಹೋವ್, ಬ್ರೈಟನ್, ವೇಮೌತ್, ಚಿಲ್ಟ್‌್ನಹ್ಯಾಂ, ಕ್ಲಿಫ್ಟನ್, ಟರ್ನ್ಬ್ರಿಡ್ಜ್ ವೆಲ್ಸ್ ಮೊದಲಾದ ಕಡೆಗಳಲ್ಲಿನ ವಿವಿಧ ಕಟ್ಟಡಗಳ ಮೂಲಕ ಖ್ಯಾತಿಪಡೆದ ಜಾನ್ ನ್ಯಾಷನಿಗೆ ಮೇಲ್ಪಂಕ್ತಿಯಾದವರು ಚೇಂಬರ್ಸ್ ಮತ್ತು ಆಡಮ್. ನ್ಯಾಷನ ಶೈಲಿಯಲ್ಲಿ ರೋಮನ್ ಮತ್ತು ಗ್ರೀಕ್ ಶೈಲಿಗಳ ಅನುಕರಣೆಯಿದೆ. ಅಷ್ಟು ಹೊತ್ತಿಗಾಗಲೇ ಗ್ರೀಸ್ ಮತ್ತು ರೋಮಿಗೆ ಭೇಟಿಕೊಟ್ಟು ಬಂದಿದ್ದ ಸ್ಟೂಆರ್ಟ್ ಮತ್ತು ರೆವೆಟ್ಟರ ಅಂಟಿಕ್ವಿಟೀಸ್ ಆಫ್ ಅಥೆನ್ಸ್ ಎಂಬ ಗ್ರಂಥ ಅಚ್ಚಾಗಿತ್ತು (1762). ಅಲ್ಲದೆ ಅಥೆನ್ಸಿನ ಅಪುರ್ವಕೃತಿಗಳಾದ ಎಲ್ಜಿನ್ ಅಮೃತಶಿಲಾಶಿಲ್ಪಗಳು ಲಂಡನ್ನಿಗೆ ಬಂದಿದ್ದುವು (1801). ಹೀಗಾಗಿ ಗ್ರೀಕ್ ಶೈಲಿಯ ಪುನರುದ್ಧರಣ ಕಾರ್ಯ ಅನೇಕ ವರ್ಷ ಯಶಸ್ವಿಯಾಗಿ ನಡೆಯಿತು. ಡಿ.ಬರ್ಟನ್ನನ ಅಥೀನಿಯಂ ಕ್ಲಬ್ ಕಟ್ಟಡವೂ ಎಚ್.ಡಬ್ಲ್ಯೂ. ಇನ್ವುಡ್ಡನ ಸೇಂಟ್ ಪಾಂಕ್ರಾಸ್ ಚರ್ಚು ಇದಕ್ಕೆ ಉತ್ತಮ ಉದಾಹರಣೆಗಳು. ಇದೇ ಮಾದರಿಯ ಗ್ರೀಕ್ ಶೈಲಿಯ ಪುನರುಜ್ಜೀವನವನ್ನು ಜರ್ಮನಿಯಲ್ಲೂ ಕಾಣಬಹುದು. ಪರ್ಸಿಯರ್ ಮತ್ತು ಘಾಂಟೇನರ ಪ್ರಾಚೀನ ಶಿಲ್ಪ ಗ್ರಂಥಗಳಿಂದ ಪ್ರಭಾವಿತರಾದ ಫ್ರಾನ್ಸಿನ ಶಿಲ್ಪಿಗಳು ಹೊಸತಾಗಿ ರೂಢಿಸಿದ ಎಂಪೈರ್ ಶೈಲಿ ಈ ಶತಮಾನದ ಮೊದಲ ಮೂವತ್ತು ವರ್ಷಗಳು ಫ್ರಾನ್ಸಿನಲ್ಲಿ ಪ್ರಸಿದ್ಧವಾಗಿತ್ತು. ಕ್ರಮೇಣ ಈ ಪ್ರಭಾವ ಅಂದಿನ ಅಮೆರಿಕಕ್ಕೂ ಹರಡಿದುದು ಗಮನಾರ್ಹವಾದ ವಿಷಯ.
ಗಾಥಿಕ್ ಶೈಲಿ
[ಬದಲಾಯಿಸಿ]ಅದುವರೆಗೂ ಬಹು ಜನರ ತಾತ್ಸ್ಸಾರಕ್ಕೆ ಒಳಗಾಗಿದ್ದ ಗಾಥಿಕ್ ಶೈಲಿಗೆ ಇದ್ದಕ್ಕಿದ್ದಂತೆ ಇಂಗ್ಲೆಂಡಿನಲ್ಲಿ ಪ್ರಾಮುಖ್ಯ ಬಂತು. 1818 ರಲ್ಲಿ ಇಂಗ್ಲೆಂಡಿನ ಸಂಸತ್ ಸಭೆ ಹೊಸ ಆಂಗ್ಲಿಕನ್ ಚರ್ಚುಗಳ ನಿರ್ಮಾಣಕ್ಕೆಂದು ಒಂದು ದಶಲಕ್ಷ ಪೌಂಡುಗಳನ್ನು ಕೊಟ್ಟಾಗ ಗಾಥಿಕ್ ಶೈಲಿಗೆ ರೆಕ್ಕೆ ಮೂಡಿದಂತಾಯಿತು. ಆಗ ನಿರ್ಮಾಣವಾದ 214 ಚರ್ಚುಗಳಲ್ಲಿ 174 ಈ ಶೈಲಿಯಲ್ಲಿವೆ. ಅವುಗಳಲ್ಲಿ ಬಹು ಪ್ರಸಿದ್ಧವಾದುದೆಂದರೆ ಲಂಡನ್ನಿನಲ್ಲಿರುವ ಸೇಂಟ್ ಲೂಕನ ಚರ್ಚು. ಇಂಥ ಪುನರುಜ್ಜೀವನಕ್ಕೆ ಅಂದಿನ ಇಂಗ್ಲೆಂಡಿನ ಅದ್ಭುತರಮ್ಯ ಸಾಹಿತ್ಯದ ಧೋರಣೆಯೂ ಕಾರಣವಾಯಿತೆನ್ನಬಹುದು. ಗಾಥಿಕ್ ಶೈಲಿಯ ಪ್ರಭಾವ ಇಂಗ್ಲೆಂಡಿನಲ್ಲಿ ಇಡೀ ನೂರು ವರ್ಷ ಇದ್ದಿತೆನ್ನಬಹುದು.ಇದೇ ಶತಮಾನದ ಸಾರ್ವಜನಿಕ ಭವನಗಳಲ್ಲಿ ಗ್ರೀಕ್, ರೋಮನ್, ಗಾಥಿಕ್ ಮತ್ತು ಎಲಿಜ಼ಬೀತನ್ ಶೈಲಿಗಳ ಮಿಶ್ರಣವಿದೆ.
20ನೆಯ ಶತಮಾನದ ವಾಸ್ತುಶಿಲ್ಪ
[ಬದಲಾಯಿಸಿ]ಒಂದನೆಯ ಮಹಾಯುದ್ಧಕ್ಕೆ ಮೊದಲು ಬಳಕೆಗೆ ಬಂದ ವಾಸ್ತುಶಿಲ್ಪಶೈಲಿಯನ್ನು ಆಧುನಿಕ ಶೈಲಿ ಎನ್ನಲಾಗಿದೆ. ಆಧುನಿಕ ಎಂಬ ಮಾತು ಪ್ರಾಚೀನ, ಮಧ್ಯಕಾಲೀನ ಎಂಬವುಗಳಂತೆ ಸಾಪೇಕ್ಷವಾದದ್ದು. ಅದು ಶಬ್ದಾರ್ಥವನ್ನು ವಿಶದೀಕರಿಸುವುದಿಲ್ಲ. ಉಪಯುಕ್ತತಾಶೀಲ (ಫಂಕ್ಷನಲ್) ಎಂಬ ಮಾತು ಆಧುನಿಕ ಕಲೆಯನ್ನು ಸರಿಯಾಗಿ ವಿವರಿಸಿತು. ಜನನಿಬಿಡವಾದ ಪಟ್ಟಣಗಳು, ಹೆಚ್ಚಿನ ವಾಹನ ಸಂಚಾರ, ದೊಡ್ಡ ದೊಡ್ಡ ಕಾರ್ಖಾನೆಗಳು, ಕಾರ್ಮಿಕರ ಮತ್ತು ಇತರ ನೌಕರರ ಸಣ್ಣಪುಟ್ಟ ವಸತಿಗೃಹಗಳು, ದೊಡ್ಡ ದೊಡ್ಡ ಕಚೇರಿಗಳು-ಇವೆಲ್ಲವನ್ನೂ ಕೇವಲ ಉಪಯೋಗದ ದೃಷ್ಟಿಯಿಂದ ಹಿಂದಿನ ಅಲಂಕರಣಶೈಲಿ ನಿರರ್ಥಕವಾಗಿ ತೋರಿತು. ಈ ಶತಮಾನದ ಪ್ರಾರಂಭದಲ್ಲಿ ಪ್ರಖ್ಯಾತ ಕಲಾವಿಮರ್ಶಕವೆನಿಸಿದ ಜಾನ್ ರಸ್ಕಿನ್ನನ ಭಾಷಣಗಳು ಮತ್ತು ಗ್ರಂಥಗಳು ಜನರ ಮನೋಧರ್ಮವನ್ನಾಗಲೆ ಬದಲಿಸಿದ್ದುವು. ಅನಂತರ ಅವನ ಶಿಷ್ಯರಲ್ಲಿ ಒಬ್ಬನಾದ ಎಲಿಯಂ ಮಾರಿಸ್ ಅಲಂಕರಣಕ್ಕಿಂತ ಮುಖ್ಯವಾದುದು ಉಪಯುಕ್ತತೆ ಎಂಬ ವಾದವನ್ನು ಮುಂದುವರಿಸಿ ಕೆಂಟ್ನಲ್ಲಿ ನವೀನ ಕಟ್ಟಡಗಳನ್ನು ರೂಪಿಸಿದ. 1851ರಲ್ಲಿ ಜೋಸೆಫ್ ಪ್ಯಾಕ್ಸ್ಟನ್ ಎಂಬ ಶಿಲ್ಪಿ ಅಂದಿನ ಮಹಾ ವಸ್ತುಪ್ರದರ್ಶನಕ್ಕಾಗಿ ಹೈಡ್ ಪಾರ್ಕಿನಲ್ಲಿ ನಿರ್ಮಿಸಿದ ಸ್ಫಟಿಕದ ಅರಮನೆಯನ್ನು (ಕ್ರಿಸ್ಟಲ್ ಪ್ಯಾಲೆಸ್) ಕಟ್ಟಲು ಕೇವಲ ಕಬ್ಬಿಣ ಮತ್ತು ಉಕ್ಕಿನ ಕಂಬ ಸಲಾಕೆಗಳನ್ನು ಬಳಸಿದನಷ್ಟೆ; ಅಲ್ಲಿಂದ ಮುಂದೆ ವಾಸ್ತುಶಿಲ್ಪದ ರೀತಿಯೇ ಬೇರೆ ದಾರಿ ಹಿಡಿಯಿತು. ಫ್ರಾನ್ಸಿನಲ್ಲಿ ಪ್ರಾರಂಭವಾದ ಇದರ ಬಳಕೆ ಕ್ರಮೇಣ ಇಡೀ ಯುರೋಪನ್ನೇ ಆಕ್ರಮಿಸಿತು.ಫ್ರಾನ್ಸಿನ ಲೆ ಕಾರ್ಬೂಸರ್, ಪೆರ್ರೆ, ಫಿನ್ಲೆಂಡಿನ ಆಲ್ಟೊ, ಸಾರಿನೆನ್, ಜರ್ಮನಿಯ ಗ್ರೋಪಿಯಸ್, ಮೆಂಡೆಲ್ಸಾನ್, ಹಾಲೆಂಡಿನ, ಡುಡಾಕ್, ಬ್ರಿಟನ್ನಿನ ಇ.ಎಂ.ಫ್ರೈ. ಗಿಬರ್ಡ್, ಎಚ್.ಎಂ.ರಾಬರ್ಟ್ಸನ್-ಈ ಮೊದಲಾದವರು ಆಧುನಿಕ ಶೈಲಿಯ ಅಂಕುರಾರ್ಪಣ ಮಾಡಿದ ಮುಖ್ಯ ಶಿಲ್ಪಿಗಳೆನ್ನಬಹುದು. ಗ್ರೋಪಿಯಸ್ ಮತ್ತು ಕಾರ್ಬೂಸರರ ಗ್ರಂಥಗಳು ಆಧುನಿಕ ಶೈಲಿಗೆ ವ್ಯಾಖ್ಯಾನ ನೀಡುವುದರ ಮೂಲಕ ಅದಕ್ಕೆ ಜನಪ್ರಿಯತೆಯನ್ನು ಗಳಿಸಿಕೊಟ್ಟಿವೆ.
ಆಧುನಿಕ ಶೈಲಿಯ ಮುಖ್ಯ ಗುಣಲಕ್ಷಣಗಳು ಹೀಗಿವೆ
[ಬದಲಾಯಿಸಿ]ನಿರ್ಮಾಣವಾದ ಮನೆ ಉದ್ದೇಶಕ್ಕೆ ಅನುಗುಣವಾಗಿರಬೇಕು. ಭಾರ ಹೊರುವ ಗೋಡೆಗಳಾವುವೂ ಅನಾವಶ್ಯಕ. ಅವುಗಳ ಬದಲು ಭದ್ರ ಕಾಂಕ್ರೀಟಿನ ತೆಳ್ಳನೆಯ ಕಂಬಗಳು, ಅದರದೇ ತೊಲೆಗಳು ಇರಬೇಕು. ಸೂರು ಇಪ್ಪಾರಾಗಿರದೆ ಒಪ್ಪಾರಾಗಿದ್ದು, ಮಟ್ಟಸವಾಗಿರಬೇಕು. ಒಟ್ಟು ಮನೆಗೆ ಭದ್ರ ಕಾಂಕ್ರೀಟಿನ ರಕ್ಷಣೆ ಇರಬೇಕು. ಅಗತ್ಯವಿದ್ದಲ್ಲೆಲ್ಲ ಕ್ಯಾಂಟಿ ಲಿವರುಗಳು ಮತ್ತು ಬಾಲ್ಕನಿಗಳಿದ್ದರೆ ಒಳ್ಳೆಯದು. ಕಿಟಕಿಗಳು ಬಾಗಿಲುಗಳು ಎಷ್ಟು ದೊಡ್ಡವಾಗಿದ್ದರೆ ಅಷ್ಟು ಒಳ್ಳೆಯದು. ಅವುಗಳ ಮೇಲೆ ಯಾವ ಬಗೆಯಾದ ಕಮಾನುಗಳೂ ಬೇಕಿಲ್ಲ. ಅಲಂಕರಣದ ಅಗತ್ಯವೇ ಇಲ್ಲ. ಇಡೀ ಮನೆ ಬೆಂಕಿಯ ಪೊಟ್ಟಣಗಳ ಸಾಲಿನಂತೆ ನೇರವೂ ಸುಲಭವೂ ಆಗಿರಬೇಕು.ಶಿಷ್ಟ ಅಳತೆಗೆ ತಕ್ಕಂತೆ ಮೊದಲೇ ಸಿದ್ಧವಾದ (ಪ್ರಿಫ್ಯಾಬ್ರಿಕೇಟೆಡ್) ಬಿಡಿ ಭಾಗಗಳನ್ನು ಹೇರಳವಾಗಿ ಬಳಸುವ ವಾಡಿಕೆ ಹೆಚ್ಚಿತು. ಎರಡನೆಯ ಮಹಾ ಯುದ್ಧವಾದ ಅನಂತರ ವಾಸದ ಮನೆಗಳ ಅಭಾವ ತೋರಿಬಂದಾಗ ಇಂಥ ಹೊಸ ಮಾದರಿಗಳ ಕಡೆ ಶಿಲ್ಪಿಗಳ ಗಮನ ಹೆಚ್ಚಾಗಿ ಹರಿಯಿತು. ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳಿಗಾಗುವ ಪುಟ್ಟ ಮನೆಯಿಂದ ಹಿಡಿದು ಎಂಟು ಹತ್ತು ಸಾವಿರ ಜನ ಕೆಲಸ ಮಾಡುವ ಗಿರಣಿಯವರೆಗಿನ ಎಲ್ಲ ಮನೆಗಳನ್ನು ನವವಿಧಾನದಿಂದ ಕಟ್ಟಲಾಗಿದೆ. ಅಲ್ಲಲ್ಲಿನ ನಿವೇಶನಗಳ ಅನುಕೂಲ, ಅಗತ್ಯ, ಉದ್ದೇಶ, ವಾಯುಗುಣಗಳಿಗೆ ಅನುಸಾರವಾಗಿ ಶಿಲ್ಪವಿಧಾನ ಮಾರ್ಪಡುತ್ತದೆ. ಹಿಂದಿನ ಯಾವ ಅಲಂಕರಣಗಳಿಗೂ ಅವಕಾಶ ಕೊಡದ ನವವಿಧಾನದ ಜೊತೆಗೆ ಹಳೆಯ ಸಂಪ್ರದಾಯಗಳ ಹಿತಮಿತ ಮಿಶ್ರಣದಿಂದ ಹೊಸ ಹೊಸ ಸುಂದರ ವಾಸ್ತು ಶೈಲಿಗಳನ್ನು ರೂಢಿಸಿರುವುದೂ ಉಂಟು. ಓಸಾಕದ ಎಕ್ಸ್‌ಪೊ 70ರ ಶಿಲ್ಪ ತಾಂತ್ರಿಕ ಶಿಲ್ಪವಿಧಾನದಲ್ಲಿ ಹೊಸ ದಾಖಲೆಯನ್ನೇ ಸ್ಥಾಪಿಸಿದೆ. (ನೋಡಿ- ಎಕ್ಸ್‌ಪೊ) ಪ್ಯಾರಿಸಿನಲ್ಲಿ ಯುನೆಸ್ಕೊ ಕಚೇರಿಗಳಿಗಾಗಿ ಇಂಗ್ಲಿಷಿನ ಙ ಅಕ್ಷರದ ಆಕಾರದ ಹೊಸ ಕಟ್ಟಡ, ಒಲಂಪಿಕ್ ಆಟಗಳಿಗಾಗಿ ರೋಮಿನಲ್ಲಿ ಶಿಲ್ಪಿ ನರ್ವಿ 1960ರಲ್ಲಿ ಕಟ್ಟಿದ ಭವನ, ಸ್ಪೇನಿನಲ್ಲಿ ಶಿಲ್ಪಿ ಯುಡಾರ್ಡೊ ಟೊರೋಜ ನಿರ್ಮಿಸಿದ ಕುದುರೆ ಪಂದ್ಯದ ಸ್ಟೇಡಿಯಂ-ಇವು ಇತರ ಕೆಲವು ನಿದರ್ಶನಗಳು. ಈಚೆಗಂತೂ ಸೌದನಿರ್ಮಾಣಕ್ಕೆ ಗಾಜು ಮತ್ತು ಪ್ಲ್ಯಾಸ್ಟಿಕ್ಗಳನ್ನೂ ಬಳಸಲಾಗಿದೆ. ರಸ್ತೆಗಳು, ಉದ್ಯಾನಗಳು, ಸೇತುವೆಗಳು, ವಠಾರಗಳು, ಗಗನ ಚುಂಬಿ ಸೌಧಗಳು, ಸುರಂಗಗಳು, ನೆಲಮಾಳಿಗೆಗಳು, ಸಿಡಿಲ ಮೊರೆಯನ್ನೂ ಭೂಕಂಪವನ್ನೂ ಎದುರಿಸುವ ಯೋಜನೆಗಳು, ಕಟ್ಟಿದ ಮನೆಯನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಒಯ್ಯುವ ವ್ಯವಸ್ಥೆಗಳು-ಇಲ್ಲೆಲ್ಲ ಇಪ್ಪತ್ತನೆಯ ಶತಮಾನದ ತಾಂತ್ರಿಕ ಹಾಗೂ ಕಲಾತ್ಮಕ ಆಧುನಿಕ ವಿಧಾನಗಳನ್ನು ನಾವು ಕಾಣಬಹುದಾಗಿದೆ.
19ನೆಯ ಶತಮಾನದಿಂದೀಚಿನ ಚಿತ್ರಕಲಾ ಸಮೀಕ್ಷೆ
[ಬದಲಾಯಿಸಿ]ಸಮಾಜದಲ್ಲಿ, ಸಾಹಿತ್ಯದಲ್ಲಿ, ವಾಸ್ತುಶಿಲ್ಪದಲ್ಲಿ ಕಾಲಕಾಲಕ್ಕೆ ಆದ ಬದಲಾವಣೆಗಳ ಪ್ರಭಾವ ಚಿತ್ರಕಲೆಯ ಮೇಲೂ ಆಯಿತು. ಫ್ರಾನ್ಸಿನ ಮಹಾಕ್ರಾಂತಿಯ ಕಾಲದ ಒಬ್ಬ ಗಣ್ಯ ಕಲಾಕಾರನೆಂದರೆ ಜ್ಯಾಕ್ವಿಸ್ ಲೂಯಿ ಡೇವಿಡ್. ಈತ ಮೊದಲು ಆಸ್ಥಾನ ಕಲಾವಿದನಾಗಿದ್ದು ಅನಂತರ ಕ್ರಾಂತಿಕಾರರೊಡಗೂಡಿ ಬಂಡಾಯದಲ್ಲಿ ಭಾಗವಹಿಸಿದವನು. ಅಭಿಜಾತ ಕಲಾಶೈಲಿಯಲ್ಲಿ ಗ್ರೀಕ್ ಮತ್ತು ರೋಮನ್ ಚರಿತ್ರೆಯ ಅನೇಕ ವರ್ಣಚಿತ್ರಗಳನ್ನು ಈತ ರಚಿಸಿದ್ದಾನೆ. ಈತನ ಕೃತಿಯಾದ ಅಶ್ವಾರೂಢ ನೆಪೋಲಿಯನನ ಚಿತ್ರ ಬಹು ಪ್ರಖ್ಯಾತವಾದುದು. ಡೇವಿಡನ ಶಿಷ್ಯ ಇಂಗ್ರೆಸ್ ಗುರುವಿಗಿಂತ ಒಂದು ಹೆಜ್ಜೆ ಮುಂದೆ ನಡೆದನೆನ್ನಬಹುದು. ಅಭಿಜಾತ ಮಾರ್ಗದ ಕಲಾವಿದರು ಚಿತ್ರದಲ್ಲಿನ ವರ್ಣವಿನ್ಯಾಸಕ್ಕೆ ಅಷ್ಟು ಗಮನವಿತ್ತಿರಲಿಲ್ಲ. ಅವರ ಗಮನವೆಲ್ಲ ಗೆರೆಗಳು ಮತ್ತು ಗಾತ್ರಗಳ ಮೇಲಿತ್ತು. ಆದ್ದರಿಂದ ಅಲ್ಲಿನ ವರ್ಣವಿನ್ಯಾಸ ಮಬ್ಬು ಮಬ್ಬಾಗಿ ನಿರ್ಜೀವವಾಗಿತ್ತು. ಇಂಗ್ರೆಸ್ ರೇಖಾಚಿತ್ರವಿನ್ಯಾಸದಲ್ಲಿ ಅಸಾಧಾರಣ ನೈಪುಣ್ಯವನ್ನು ತೋರಿಸಿದ್ದಾನೆ. ಡೇವಿಡನ ಮತ್ತೊಬ್ಬ ಶಿಷ್ಯ ಬ್ಯಾರನ್ಗ್ರಾಷ್ ನೆಪೋಲಿಯನನ ಸೈನ್ಯದಲ್ಲಿ ಅಧಿಕಾರಿಯಾಗಿದ್ದುಕೊಂಡು ಅಲ್ಲಿನ ಯುದ್ಧವಿಷಯಗಳನ್ನು ಚಿತ್ರಿಸಿದ್ದಾನೆ. ಸೈನಿಕರ ಶೌರ್ಯದ ಜೊತೆಗೆ ಅವರ ಅತೀವ ವೇದನೆ, ದುಃಖಗಳನ್ನೂ ಗ್ರಾಸ್ ಹೃದಯ ಕರಗುವಂತೆ ಚಿತ್ರೀಕರಿಸಿದ್ದಾನೆ.
ಡೆಲಕ್ವ್ರಾ ಎಂಬ ಫ್ರೆಂಚ್ ಕಲಾವಿದನ ನಾಯಕತ್ವ
[ಬದಲಾಯಿಸಿ]ಅನಂತರ ಡೆಲಕ್ವ್ರಾ ಎಂಬ ಫ್ರೆಂಚ್ ಕಲಾವಿದನ ನಾಯಕತ್ವದಲ್ಲಿ ರೊಮ್ಯಾನ್ಟಿಸಿಸ್ಟರ ಹೊಸದೊಂದು ಕಲಾಶೈಲಿ ಆವರಿಸಿತು. ಅಭಿಜಾತ ಶೈಲಿಯನ್ನು ಇವರು ಒಪ್ಪಲಿಲ್ಲ. ಅಲ್ಲದೆ ಅಭಿಜಾತ ವಸ್ತುವನ್ನೂ ಇವರು ಆರಿಸಲಿಲ್ಲ. ತಮ್ಮ ಕಾಲದ ಜನಜೀವನವೇ ಚಿತ್ರದ ವಸ್ತುವಾಗಬೇಕೆಂದು ಇವರು ವಾದಿಸಿದರು. ಅಲ್ಲದೆ ಗೀಟು, ಗೆರೆಗಳಿಗಿಂತ ಬಣ್ಣಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಡಲಾರಂಭಿಸಿದರು. ಅದರಂತೆ ಡೆಲಕ್ವ್ರಾ ತನ್ನ ಚಿತ್ರಗಳಿಗಾಗಿ ಧರ್ಮಯುದ್ಧನಿರತರಾದ ಯೋಧವೀರರು, ಬೈಬಲಿನ ಕಥೆಗಳು, ಆಲ್ಜಿಯರ್ಸಿನ ಜನತೆ, ಗ್ರೀಕರಿಗೂ ತುರ್ಕರಿಗೂ ಅಂದು ನಡೆಯುತ್ತಿದ್ದ ಯುದ್ಧ-ಇಂಥ ವಸ್ತುಗಳನ್ನಾಯ್ದುಕೊಂಡ. ಸಿಂಹದ ಬೇಟೆ ಎಂಬ ಹೆಸರಿನ ಅವನ ಒಂದು ಚಿತ್ರ ಬಹು ಸಹಜವಾಗಿದೆ.
ಇತಿಹಾಸ
[ಬದಲಾಯಿಸಿ]18ನೆಯ ಶತಮಾನದ ಪ್ರಾರಂಭದಲ್ಲಿ ವೆನಿಸಿದಲ್ಲಿ ಟೆಷಿಯನ್, ರೋಮಿನಲ್ಲಿ ಮೈಕೆಲೇಂಜಲೊ, ಸ್ಪೇನಿನಲ್ಲಿ ವೆಲಾಸ್ಕ, ಫ್ಲಾಂಡರ್ಸಿನಲ್ಲಿ ರೂಬೆನ್ಸ್, ನೆದರ್ಲೆಂಡಿನಲ್ಲಿ ರೆಂಬ್ರಾನ್, ಜರ್ಮನಿಯಲ್ಲಿ ಡ್ಯೂರರ್, ಫ್ರಾನ್ಸಿನಲ್ಲಿ ಪೌಸಿನ್-ಇವರು ಪ್ರಸಿದ್ಧರಾದಂತೆ ಇಂಗ್ಲೆಂಡಿನಲ್ಲಿ ವಿಲಿಯಂ ಹೋಗಾರ್ತ್ ತುಂಬ ಖ್ಯಾತನಾದ. ಅನಂತರ ಜೋಷುವ ರೇನಾಲ್ಡ್‌್ಸ ಮತ್ತು ಥಾಮಸ್ ಗೇನ್ಸ್‌ಬರೊ ಎಂಬಿಬ್ಬರು ಕಲಾವಿದರು ಮನುಷ್ಯನ ಭಾವ ಚಿತ್ರಣದಲ್ಲಿ ಅಂದರೆ ತಸ್ವೀರು ಚಿತ್ರಣದಲ್ಲಿ ಹೆಸರು ಗಳಿಸಿದರು. ದಿ ಸ್ಟ್ರಾಬೆರಿ ಗರ್ಲ್, ಮಾಸ್ಟರ್ ಹೇರ್, ದಿ ಏಜ್ ಆಫ್ ಇನ್ನೊಸೆನ್ಸ್-ಇವು ರೇನಾಲ್ಡ್ಸನ ಖ್ಯಾತ ಕೃತಿಗಳು. ಲೇಡಿ ವಾಕಿಂಗ್ ಇನ್ ಸೇಂಟ್ ಜೇಮ್ಸ್ ಪಾರ್ಕ್, ಮಿಸ್ಟ್ರೆಸ್ ಸಿಡಾನ್ಸ್, ದಿ ಬ್ಲೂ ಬಾಯ್-ಇವು ಗೇನ್ಸ್‌ಬರೋನ ಕೆಲವು ಖ್ಯಾತ ಚಿತ್ರಗಳು. ಬೆಂಜಮಿನ್ ವೆಸ್ಟ್ ಮತ್ತು ಜಾನ್ ಸಿಂಗಲ್ಟನ್ ಕಾಪ್ಲೆ ಎಂಬಿಬ್ಬರು ಅಮೆರಿಕನ್ನರು ವರ್ಣಚಿತ್ರ ವೀಕ್ಷಣಕ್ಕೆಂದು ಯುರೋಪಿಗೆ ಬಂದವರು ಪ್ರವಾಸಾನಂತರ ಇಂಗ್ಲೆಂಡಿನಲ್ಲಿ ನೆಲೆಸಿ ಅದ್ಭುತ ಚಿತ್ರಗಳನ್ನು ರಚಿಸಿದರು. ಅಮೆರಿಕದಲ್ಲಿ ಸ್ವಾತಂತ್ರ್ಯ ಯುದ್ಧವಾಗು ತ್ತಿದ್ದ ಸಮಯದಲ್ಲಿ ಇಂಗ್ಲಿಷ್ ಕವಿಯೊಬ್ಬ ಚಿತ್ರಗಾರನಾಗಿಯೂ ಪ್ರಸಿದ್ಧಿಗೆ ಬಂದ. ಅವನೇ ವಿಲಿಯಂ ಬ್ಲೇಕ್. ಆತ ಪ್ರಧಾನವಾಗಿ ಕೆತ್ತನೆಯ ಕೆಲಸದಲ್ಲಿ ನಿಪುಣ. ಮರದ ಫಲಕಗಳ ಮೇಲೆ ಚಿತ್ರಗಳನ್ನು ಕೊರೆದು ಅಚ್ಚು ತಯಾರಿಸಿ ಅದರಿಂದ ಮುದ್ರಣ ಮಾಡುವುದು ಅವನ ಹವ್ಯಾಸ. ಅದಕ್ಕಾಗಿ ಆತ ಮೊದಲು ಬಣ್ಣಗಳಿಂದ ತಯಾರಿಸುತ್ತಿದ್ದ ಆಲೇಖ್ಯ ಚಿತ್ರಗಳೂ ಅವನ ಕಲಾವಂತಿಕೆಗೆ ಸಾಕ್ಷಿಗಳಾಗಿವೆ. ಮುಂದೆ ಬಂದ ಜಾನ್ ಕಾನ್ಸ್ಟಬಲ್ ಚಿತ್ರಗಳಿಗೆ ನೈಜವರ್ಣಗಳನ್ನು ಬಳಸಿ ಅವುಗಳ ಸಹಜತೆಯನ್ನು ಹೆಚ್ಚಿಸಿದನಲ್ಲದೆ ಗುಪ್ಪೆಗುಪ್ಪೆಯಾಗಿ ಗಿಡಮರಗಳಿಗೆ ಕೇವಲ ಕಂದುಬಣ್ಣವನ್ನು ಉಪಯೋಗಿಸುತ್ತಿದ್ದರು. ಕಾನ್ಸ್ಟಬಲ್ ಆದರೋ ಹಸಿರು, ಕಪ್ಪು ಬಣ್ಣಗಳ ಛಾಯೆಗಳನ್ನು ಬಳಸಿ ಅವು ಸಹಜವಾಗಿ ತೋರುವಂತೆ ಮಾಡಿದ. ಸೂರ್ಯೋದಯ ಸೂರ್ಯಾಸ್ತಗಳ ಸಮುದ್ರದ ಸೊಬಗು, ಕಾಂತಿ ಮತ್ತು ಗಾಂಭೀರ್ಯಗಳನ್ನು ವರ್ಣಗಳಲ್ಲಿ ಉಜ್ಜ್ವಲವಾಗಿ ಸೆರೆಹಿಡಿದಿರುವ ಕಲಾವಿದನೆಂದರೆ ಜೋಸೆಫ್ ಮಲ್ಲಾರ್ಡ್ ವಿಲಿಯಂ ಟರ್ನರ್. ಪೆಟ್ವರ್ತ್ ಹೌಸಿನಿಂದ ಕಾಣುವ ಸರೋವರ ಮತ್ತು ವಿನಿಸಿನ ಗ್ರ್ಯಾಂಡ್ ಕೆನಾಲ್-ಎಂಬೆರಡು ಚಿತ್ರಗಳು ಟರ್ನರನ ಪ್ರಸಿದ್ಧ ಕೃತಿಗಳಾಗಿವೆ.
ಫ್ರಾನ್ಸಿನ ಬಾರ್ಬಿಜಾ಼ನ್ ಪಂಥದ ಪ್ರಮುಖ ಶ್ರದ್ಧಾಳು
[ಬದಲಾಯಿಸಿ]ಫ್ರಾನ್ಸಿನ ಬಾರ್ಬಿಜಾ಼ನ್ ಪಂಥದ ಪ್ರಮುಖ ಶ್ರದ್ಧಾಳುಗಳೆಂದರೆ ಥಿಯೊಡರ್ ರೂಸೊ, ಕೇರೊ, ಮಿಲೆ ಇವರು ಬಾರ್ಬಿಜಾ಼ನ್ ಹಳ್ಳಿಯ ಸುತ್ತಣ ಕಾಡುಗಳ ಸಹಜರಮ್ಯತೆಯನ್ನು ಚಿತ್ರಿಸುವಲ್ಲಿ ಸಹಜತೆಯನ್ನೂ ಪರಿಣಾಮ ವಿಧಾನವನ್ನೂ (ಇಂಪ್ರೆಷನಿಸಂ) ಬಳಸಿ ಮುಖ್ಯರೆನಿಸಿದ್ದಾರೆ.ಇಲ್ಲಿಂದ ಮುಂದೆ ಆಧುನಿಕ ಕಲೆ ಬಹು ವಿಸ್ತಾರವಾಗಿ, ಬಹು ಸಂಕೀರ್ಣವಾಗಿ ಬೆಳೆದು ಬಂದಿದೆ. ಅದು ಸೃಷ್ಟಿಸಿರುವ ಕೆಲವು ಪ್ರಸ್ಥಾನಗಳ ಮೂಲಕ ಕೇವಲ ಸಂಕ್ಷೇಪವಾಗಿ ಅದರ ಚರಿತ್ರೆಯನ್ನು ಇಲ್ಲಿ ಗಮನಿಸಲಾಗಿದೆ.
ಚಿತ್ರಕಲೆ
[ಬದಲಾಯಿಸಿ]ಸಾಮಾನ್ಯವಾಗಿ ಚಿತ್ರಕಲೆಯಲ್ಲಿ ಕಣ್ಣಿಗೆ ಕಂಡ ಮೂರ್ತರೂಪಗಳನ್ನು ಹಿಡಿದಿಡುವುದೇ ಮುಖ್ಯವಾದರೂ ಒಂದು ಬಗೆಯ ನವೀನ ಚಿತ್ರಕಲೆ ತದ್ವಿರುದ್ಧವಾದ ದಾರಿಯನ್ನು ಹಿಡಿದಿದೆ. ಅದೇ ಅಮೂರ್ತ ಚಿತ್ರವಿಧಾನ (ಅಬ್ಸ್‌ಟ್ರಾಕ್ಟ್ ಆರ್ಟ್). ಸಾಮಾನ್ಯವಾಗಿ ಸಹಜ ನಿರೂಪಣೆಯದಾದರೂ ಇಲ್ಲಿ ಪದಾರ್ಥಚಿತ್ರಣಕ್ಕಿಂತ ಭಾವ ಚಿತ್ರಣ ಮುಖ್ಯ. ಫಾವಿಸಂ, ಕ್ಯೂಬಿಸಂ (ಘನಾಕೃತಿ ಕಲಾವಿಧಾನ), ಎಕ್ಸ್‌ಪ್ರೆಷನಿಸಂ (ಅಭಿವ್ಯಕ್ತಿ ಪಂಥ) ಇತ್ಯಾದಿ ವಿಧಾನಗಳ ತಳಹದಿಯಾಗಿ ಅಮೂರ್ತ ಚಿತ್ರ ವಿಧಾನ ಇದೆ ಎನ್ನಬಹುದು. ಇದರ ಮೊದಲಿಗ ಕಾಂಡಿಸ್ಕಿ (1910). ಈ ವಿಧಾನದಲ್ಲಿ ಗೀರುಗಳು, ಮೇಲುಮೈ, ಆಕೃತಿಗಳು, ವರ್ಣಗಳು ಎಲ್ಲವೂ ಮೂಲವಸ್ತುವಿಗೆ ಏನೂ ಸಂಬಂಧವಿಲ್ಲದಂತೆ ಮೂಡಿಬಂದಿರುತ್ತವೆ. ಜ್ಯಾಕ್ಸನ್, ಪೊಲಾಕ್, ಕೂನಿಂಗ್, ಹ್ಯಾನ್ಸ್ ಹಾಫ್ಮನ್-ಇವರು ಈ ಪಂಥದ ಪ್ರಮುಖರು. ಅಮೂರ್ತ ಚಿತ್ರ ವಿಧಾನದ ಒಂದು ಅಂಗ (ಕನ್ಸ್ಟ್ರಕ್ಟಿವಿಸಂ) ರಷ್ಯದಲ್ಲಿ ಬೆಳೆದು ಬಂತು. ನಾಮ್ಗಾಬೊ, ಅಂತೊನಿ ಪೆವ್ಸ್ನರ್, ಐ ಲಿಸಿಟಸ್ಕಿ-ಇವರು ಈ ಪಂಥದ ಪ್ರಮುಖರು. ಕ್ಯೂಬಿಸಂ (ಘನಾಕೃತಿ ಕಲಾವಿಧಾನ) ಕೂಡ ಅಮೂರ್ತ ಚಿತ್ರವಿಧಾನದ ಪುರ್ವ ಭಾಗವೇ ಆಗಿದೆ. ಸಹಜ ಆಕೃತಿಗಳಿಗಿಂತ ಜ್ಯಾಮಿತೀಯ ಆಕೃತಿಗಳಿಗೇ ಇಲ್ಲಿ ಪ್ರಾಮುಖ್ಯ. ಈ ಪಂಥದಲ್ಲಿ ಪಿಕಾಸ್ರೊ ಬಾರ್ಕ್, ಸೀಸಾನ್, ಗ್ರೀಸ್ ಮತ್ತು ಲೇಗರ್ ಪ್ರಮುಖರು.ಎಲ್ಲ ಹಳೆಯ ವಿಧಾನಗಳನ್ನೂ ಸಂಪ್ರದಾಯಗಳನ್ನೂ ಪ್ರತಿಭಟಿಸಿ ಹೊಸ ಜಾಡನ್ನು ಅರಸಹೊರಟ (1916-21) ಐರೋಪ್ಯ ಕಲಾವಿದರ ನೂತನ ಶೈಲಿಯನ್ನು ದಾದಾಯಿಸಂ ಎನ್ನುತ್ತಾರೆ. ಇದರ ಪ್ರಭಾವದಿಂದಲೇ ಸರ್ರಿಯಲಿಸಂ (ಅತಿವಾಸ್ತವಿಕ ವಿಧಾನ) ಮೊದಲಾದ ವಿಶೇಷ ವಿಧಾನಗಳು ಆವಿರ್ಭವಿಸಿದುವು. ಹಾಲೆಂಡಿನಲ್ಲಿ 1917-28ರ ಸುಮಾರಿನಲ್ಲಿ ಚೌಕಗಳನ್ನು, ಮೂಲವರ್ಣಗಳನ್ನು ಪ್ರಧಾನವಾಗುಳ್ಳ ಡೇ ಸ್ಟಿಲ್ ಎಂಬ ಶೈಲಿ ಬಳಕೆಗೆ ಬಂತು. ವಾನ್ ಡೋಸ್ಬರ್ಗ್, ಮಾಂಡ್ರಯನ್ ಮೊದಲಾದವರು ಈ ಹೊಸ ಮಾದರಿಯ ಅಧ್ವರ್ಯುಗಳೆಂದು ಹೆಸರಾಗಿದ್ದಾರೆ.
ಎಕ್ಸ್‌ಪ್ರೆಷನಿಸಂ
[ಬದಲಾಯಿಸಿ]ಯಾವ ಕಲೆಯಲ್ಲಿ ಪ್ರಕೃತಿಗಿಂತ ಕಲೆಗಾರನ ಭಾವೋದ್ವೇಗಗಳಿಗೆ ಹೆಚ್ಚಿನ ಸ್ಥಾನವಿರುತ್ತದೋ ಅಂಥ ಕೃತಿಗಳನ್ನು ಅಭಿವ್ಯಕ್ತಿ ಪಂಥದವೆನ್ನುತ್ತಾರೆ (ಎಕ್ಸ್‌ಪ್ರೆಷನಿಸಂ). ಮ್ಯಾಟೆಸ್ಸಿ ಈ ಪಂಥದ ಪ್ರಮುಖ ಕಲಾವಿದೆ. ಪರಿಣಾಮ ವಿಧಾನಾನಂತರದ ಚಿತ್ರಕಲೆ ಈ ವಿಭಾಗಕ್ಕೆ ಸೇರುತ್ತದೆ. ಇದರ ಒಂದು ರೂಪವೇ ಫ್ರಾನ್ಸಿನ ಫಾವಿಸಂ. ಸಾಹಿತ್ಯದಲ್ಲೂ ಅಭಿವ್ಯಕ್ತಿ ಪಂಥದ ಲೇಖಕರಿದ್ದಾರೆ. ಸ್ವೇಚ್ಛಾ ಸಂಕೇತ ವಿಧಾನ (ಫ್ಯೂಚರಿಸಂ) ಇಟಲಿಯಲ್ಲಿ ಮೂಡಿತೆನ್ನಬಹುದು. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಯಂತ್ರಯುಗದ ಕಾರ್ಯವೈಭವವನ್ನು ಕಲೆಯಲ್ಲಿ ಕೊಂಡಾಡಲು ರೂಪುಗೊಂಡ ಈ ವಿಧಾನವನ್ನು ಪ್ರಾರಂಭಿಸಿದವ ಕವಿ ಮ್ಯಾರಿನೆಟ್ಟಿ.ಪರಿಣಾಮ ವಿಧಾನವೂ (ಇಂಪ್ರೆಷನಿಸಂ) ಫ್ರಾನ್ಸ್ ದೇಶದ್ದು, ಪ್ರಕೃತಿಯಲ್ಲಿ ನೇರ ಕಣ್ಣಿಗೆ ಕಂಡದ್ದನ್ನು ಕಂಡಂತೆ ಚಿತ್ರಿಸುವುದೇ ಈ ವಿಧಾನದ ಗುರಿ. ಒಂದೇ ಸಮುದ್ರ, ಒಂದೇ ಸೂರ್ಯೋದಯ ದಿನದಿನವೂ ಹೊಸದಾಗಿ ಕಾಣಬಹುದು. ಕಾಣ್ಕೆ ವ್ಯಕ್ತಿ ವ್ಯಕ್ತಿಗೂ ಭಿನ್ನವಾಗಿರಬಹುದು. ಬೇರೆ ಬೇರೆ ಜಾಗದಿಂದ ಅದೇ ವಿಷಯ ಬೇರೆ ಬೇರೆಯಾಗಿ ಭಾಸವಾಗಬಹುದು. ಇದನ್ನು ಹಿಡಿಯುವುದೇ ಪರಿಣಾಮ ವಿಧಾನದ ಉದ್ದೇಶ. ಈ ಪಂಥದವರಲ್ಲಿ ಮಾನೆ, ಸಿಸ್ಲೆ, ಪಿಸ್ಯಾರೋ-ಇವರು ಮುಖ್ಯರು. ಉಳಿದವರೆಂದರೆ ರೆನಾರ್, ಡೆಗಾಸ್.ಮುಖ್ಯವಾದ ಕೆಲವು ಪಂಥಗಳ ಬಗ್ಗೆ ಒಂದೆರಡು ಮಾತುಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ. ವಿವರಗಳಿಗೆ ಆಯಾ ಪಂಥ ಮತ್ತು ಆಯಾ ದೇಶಗಳ ಕಲಾವಿಭಾಗಗಳನ್ನು ನೋಡಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ http://www.prajavani.net/news/article/2011/11/09/132407.html[permanent dead link]
- ↑ Mattinson, Lindsay (2019). Understanding Architecture A Guide To Architectural Styles (in ಇಂಗ್ಲಿಷ್). Amber Books. p. 21. ISBN 978-1-78274-748-2.
- ↑ "ಆರ್ಕೈವ್ ನಕಲು". Archived from the original on 2017-04-26. Retrieved 2016-10-27.
- ↑ Fortenberry, Diane (2017). THE ART MUSEUM (in ಇಂಗ್ಲಿಷ್). Phaidon. p. 156. ISBN 978-0-7148-7502-6.
- ↑ Fortenberry, Diane (2017). THE ART MUSEUM (in ಇಂಗ್ಲಿಷ್). Phaidon. p. 157. ISBN 978-0-7148-7502-6.
- ↑ Fortenberry, Diane (2017). THE ART MUSEUM (in ಇಂಗ್ಲಿಷ್). Phaidon. p. 157. ISBN 978-0-7148-7502-6.
- Pages using the JsonConfig extension
- All articles with dead external links
- Articles with dead external links from ಸೆಪ್ಟೆಂಬರ್ 2021
- Articles with invalid date parameter in template
- Articles with permanently dead external links
- CS1 ಇಂಗ್ಲಿಷ್-language sources (en)
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ಕಲೆ ಮತ್ತು ಸಂಸ್ಕೃತಿ ಮಾದರಿಗಳು
- ಕಲೆ
- ವಾಸ್ತುಶಿಲ್ಪ